ADVERTISEMENT

ಬೆಳಿಗ್ಗೆ 6ರ ಬಳಿಕವಷ್ಟೇ ಮಸೀದಿಗಳಲ್ಲಿ ಆಜಾನ್‌; ಮುಸ್ಲಿಂ ಧರ್ಮಗುರುಗಳ ತೀರ್ಮಾನ

ಆದೇಶ ಪಾಲಿಸಲು ಮುಸ್ಲಿಂ ಧರ್ಮಗುರುಗಳ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 15 ಮೇ 2022, 20:33 IST
Last Updated 15 ಮೇ 2022, 20:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಎಲ್ಲ ಮಸೀದಿಗಳಲ್ಲೂ ಬೆಳಿಗ್ಗೆ 5 ಗಂಟೆಗೆ ಮೈಕ್‌ ಮೂಲಕ ಆಜಾನ್‌ ಕೂಗದಿರಲು ನಿರ್ಧರಿಸಲಾಗಿದೆ. ಅಲ್ಲದೆ, ಬೆಳಿಗ್ಗೆ 6 ಗಂಟೆಯ ಬಳಿಕ ಆಜಾನ್‌ ಕೂಗಲು ಮೈಕ್‌ ಬಳಕೆಗೆ ಸರ್ಕಾರ ಮತ್ತು ಸುಪ್ರೀಂಕೋರ್ಟ್‌ ನೀಡಿರುವ ಆದೇಶ ಮತ್ತು ಮಾರ್ಗಸೂಚಿಯನ್ನು ಪಾಲಿಸಲು ಮುಸ್ಲಿಂ ಧರ್ಮ ಗುರುಗಳು, ಮೌಲ್ವಿಗಳು ಮತ್ತು ಮುಖಂಡರ ಸಭೆ ತೀರ್ಮಾನಿಸಿದೆ.

ಷರಿಯತ್–ಎ–ಹಿಂದ್‌ ಸಂಘಟನೆ ಈ ಸಂಬಂಧ ಏರ್ಪಡಿಸಿದ್ದ ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಸಂಘಟನೆಯ ಅಮೀರ್‌–ಎ–ಷರಿಯತ್‌ ಆಗಿರುವ ಮೌಲಾನ ಸಗೀರ್‌ ಅಹಮದ್‌ ಅಧ್ಯಕ್ಷತೆಯಲ್ಲಿ ಶನಿವಾರ ಸಭೆ ನಡೆಯಿತು.

ಸಭೆಯ ಕುರಿತು ಸುದ್ದಿಗಾರರರಿಗೆ ಮಾಹಿತಿ ನೀಡಿದ ಉಮರ್‌ ಶರೀಫ್‌, ಈ ನಿರ್ಧಾರ ರಾಜ್ಯದ ಎಲ್ಲ ಭಾಗಗಳಿಗೂ ಅನ್ವಯವಾಗಲಿದೆ. ಎಲ್ಲ ಮಸೀದಿಗಳ ಮುಖಂಡರೂ ಒಪ್ಪಿಗೆ ನೀಡಿದ್ದಾರೆ. ಇದಕ್ಕೆ ಯಾರ ವಿರೋಧವೂ ವ್ಯಕ್ತವಾಗಿಲ್ಲ. ಬೆಳಿಗ್ಗೆ 5 ಕ್ಕೆ ಆಜಾನ್‌ ಕೂಗುವುದಿಲ್ಲ. ಉಳಿದ ಸಮಯದಲ್ಲಿ ಸರ್ಕಾರ ಮತ್ತು ಸುಪ್ರೀಂಕೋರ್ಟ್‌ ತೀರ್ಮಾನವನ್ನು ಚಾಚೂ ತಪ್ಪದೇ ಪಾಲಿಸಲು ನಿರ್ಧರಿಸಿದ್ದೇವೆ ಎಂದರು.

ADVERTISEMENT

‘ಮುಸ್ಲಿಮರು ಕಾನೂನಿಗೆ ಬೆಲೆ ಕೊಡುವುದಿಲ್ಲ ಎಂಬ ವದಂತಿ ಹರಡಿತ್ತು. ನಾವೂ ಕಾನೂನು ಪಾಲಿಸುತ್ತೇವೆ. ವದಂತಿ ಸುಳ್ಳು ಎಂಬುದು ಸಾಬೀತಾಗಿದೆ’ ಎಂದು ಅವರು ಹೇಳಿದರು.

ಕರ್ನಾಟಕ ವಕ್ಫ್‌ ಮಂಡಳಿ ಅಧ್ಯಕ್ಷ ಮೊಹಮ್ಮದ್ ಷಫಿ ಸಾ ಅದಿ ಮಾತನಾಡಿ, ಬೆಳಿಗ್ಗೆ 5 ಕ್ಕೆ ಆಜಾನ್‌ ಕೂಗುವುದು ಪ್ರಾರ್ಥನೆ ಅಲ್ಲ. ಪ್ರಾರ್ಥನೆ ಮಾಡಲು ಕರೆಯುವ ಸಂದೇಶ. ಆಜಾನ್‌ಗೆ ಸರ್ಕಾರ ಅಥವಾ ಸುಪ್ರೀಂಕೋರ್ಟ್‌ನ ವಿರೋಧವಿಲ್ಲ. ಪ್ರಾರ್ಥನೆಗೆ ಮೈಕ್‌ ಮೂಲಕವೇ ಕರೆ ನೀಡಬೇಕಾಗುತ್ತದೆ. ಅದನ್ನು ಸರ್ಕಾರದ ಆದೇಶವನ್ನು ಪಾಲಿಸಿಯೇ ಮಾಡುತ್ತೇವೆ. ಬೆಳಿಗ್ಗೆ 6 ಗಂಟೆಯ ಬಳಿಕ ಮೈಕ್‌ ಬಳಸಲು ಎಲ್ಲ ಮಸೀದಿಗಳೂ ಪೊಲೀಸರಿಂದ ಅನುಮತಿ ಪಡೆಯುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.