ಎಂ.ಬಿ.ಪಾಟೀಲ
ಬೆಂಗಳೂರು: ‘ಗಣಿಗಾರಿಕೆ ಮತ್ತು ಬೃಹತ್ ನಿರ್ಮಾಣ ಕಾಮಗಾರಿಗಳಲ್ಲಿ ಬಳಕೆಯಾಗುವ ಯಂತ್ರೋಪಕರಣ ತಯಾರಿಸುವ ಸ್ವೀಡನ್‌ನ ಎಪಿರಾಕ್ ಕಂಪನಿಯು ರಾಜ್ಯದಲ್ಲಿ ₹1,500 ಕೋಟಿ ಹೂಡಿಕೆ ಮಾಡಲಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ಬಂಡವಾಳ ಆಕರ್ಷಣೆಗಾಗಿ ಸ್ವೀಡನ್ ಪ್ರವಾಸದಲ್ಲಿರುವ ಅವರು ಅಲ್ಲಿನ ಉದ್ಯಮಿಗಳ ಜತೆಗಿನ ಸಭೆಯ ನಂತರ ಮಾಹಿತಿ ಹಂಚಿಕೊಂಡಿದ್ದಾರೆ.
‘ಎಪಿರಾಕ್‌ನ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆ್ಯಂಡ್ ಡಿ) ಕೇಂದ್ರವು ಬೆಂಗಳೂರಿನಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ 500 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದಿದ್ದಾರೆ.
‘ಆರ್ ಆ್ಯಂಡ್ ಡಿ ಕೇಂದ್ರ ಹಾಗೂ ಕಾರ್ಯಚಟುವಟಿಕೆ ವಿಸ್ತರಣೆಗೆ ಕಂಪನಿಯು ಪ್ರಸಕ್ತ ಆರ್ಥಿಕ ವರ್ಷದಲ್ಲೇ ₹500 ಕೋಟಿ ಹೂಡಿಕೆ ಮಾಡಲಿದೆ. 2030ರ ವೇಳೆಗೆ ಇನ್ನೂ ₹1,000 ಕೋಟಿ ಹೂಡಿಕೆ ಮಾಡಲಿದೆ’ ಎಂದು ಮಾಹಿತಿ ನೀಡಿದ್ದಾರೆ.
ಆಹಾರ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಕ್ಷೇತ್ರದ ದೈತ್ಯ ಕಂಪನಿ ‘ಟೆಟ್ರಾ ಪ್ಯಾಕ್’ನ ಮುಖ್ಯಸ್ಥರ ಜತೆ ಸಚಿವ ಪಾಟೀಲ ಅವರು ರಾಜ್ಯದಲ್ಲಿ ಹೂಡಿಕೆ ಮತ್ತು ಪಾಲುದಾರಿಕೆಗೆ ಇರುವ ಅವಕಾಶಗಳ ಬಗ್ಗೆ ಚರ್ಚಿಸಿದರು. ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದ ತಯಾರಿಕಾ ಕಂಪನಿ ‘ಎಸ್‌ಎಎಬಿ’ಯ ಸಿಇಒ ಕ್ರಿಸ್ಟಿಯನ್ ಹೆಡೆಲಿನ್ ಜತೆ ಮಾತುಕತೆ ನಡೆಸಿದ್ದು, ರಾಜ್ಯದಲ್ಲಿ ವಿನ್ಯಾಸ ಕೇಂದ್ರ ಸ್ಥಾಪನೆ ಬಗ್ಗೆ ಚರ್ಚಿಸಿದ್ದಾರೆ ಎಂದು ಅವರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.