ADVERTISEMENT

ವಿಧಾನಸೌಧ: ಮಾಧ್ಯಮಕ್ಕೆ ಇನ್ನಷ್ಟು ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 19:42 IST
Last Updated 16 ಜುಲೈ 2021, 19:42 IST
ವಿಧಾನಸೌಧ
ವಿಧಾನಸೌಧ   

ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ನಿತ್ಯದ ಚಟುವಟಿಕೆಗಳ ಮೇಲಿನ ನಿರ್ಬಂಧವನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

ವಿಧಾನಸಭೆ ಕಲಾಪದ ವೇಳೆ ಸದನದೊಳಗೆ ಛಾಯಾಗ್ರಾಹಕರು ಮತ್ತು ವಿಡಿಯೊ ಚಿತ್ರೀಕರಣಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಅಧಿವೇಶನ ಮಾತ್ರವಲ್ಲದೆ, ಇತರ ಸಂದರ್ಭಗಳಲ್ಲೂ ವಿಧಾನಸೌಧದ ಕಾರಿಡಾರ್‌ಗಳಲ್ಲಿ ಪತ್ರಿಕಾ ಛಾಯಾಗ್ರಾಹಕರು ಛಾಯಾಗ್ರಹಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ವಿಡಿಯೋ ಚಿತ್ರೀಕರಣ ನಡೆಸುವುದನ್ನು ಸಚಿವಾಲಯ ಸಂಪೂರ್ಣ ನಿರ್ಬಂಧಿಸಲಾಗಿದೆ. ಈ ಸಂಬಂಧ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ರವೀಂದ್ರ ಅವರು ಸುತ್ತೋಲೆ ಹೊರಡಿಸಿದ್ದಾರೆ.

‘ವಿಧಾನಸೌಧದ ಕಾರಿಡಾರುಗಳಲ್ಲಿ ವಿಡಿಯೋ ಚಿತ್ರೀಕರಣ ಮತ್ತು ಪತ್ರಿಕಾ ಛಾಯಾಗ್ರಹಣ ಮಾಡುತ್ತಿದ್ದು, ಇದರಿಂದ ಹಲವಾರು ಹಲವಾರು ಬಾರಿ ಗಣ್ಯ ವ್ಯಕ್ತಿಗಳ ಸುಗಮ ಚಲನವಲನಕ್ಕೆ ಅಡ್ಡಿಯುಂಟಾಗುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಸುತ್ತೋಲೆಯಲ್ಲಿ ಪ್ರತಿಪಾದಿಸಿದ್ದಾರೆ.

ADVERTISEMENT

ಸುಗಮ ಚಲನೆ ಮತ್ತು ಭದ್ರತೆಯ ಹಿತದೃಷ್ಟಿಯಿಂದ ಮುಖ್ಯಮಂತ್ರಿಯವರು ಮತ್ತು ಇತರ ಸಚಿವರಿಂದ ಹೇಳಿಕೆ ಪಡೆಯಲು ವಿಧಾನಸೌಧದ ಕೆಂಗಲ್ ದ್ವಾರದ ಬಳಿ ಅವಕಾಶ ಮಾಡಿಕೊಡಲಾಗಿದೆ. ಇನ್ನು ಮುಂದೆ ನಿಗದಿ ಮಾಡಿದ ಈ ಸ್ಥಳವನ್ನು ಬಿಟ್ಟು ಕಾರಿಡಾರ್‌ಗಳಲ್ಲಿ ಚಿತ್ರೀಕರಣ ಮಾಡುವುದನ್ನು ಭದ್ರತೆ ಮತ್ತು ಶಿಸ್ತನ್ನು ಕಾಪಾಡಬೇಕಾದ ಕಾರಣ ನಿರ್ಬಂಧಿಸುವುದು ಸೂಕ್ತ ಎಂಬ ಪ್ರಸ್ತಾವನೆಗೆ ಮುಖ್ಯಮಂತ್ರಿಯವರು ಅನುಮೋದನೆ ನೀಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಸಚಿವರು ಇಲಾಖೆಯ ಪ್ರಗತಿ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಮಾಧ್ಯಮಗಳಿಗೆ ಹೇಳಿಕೆ ನೀಡುವ ಸಂದರ್ಭದಲ್ಲಿ ಸಭಾ ಕೊಠಡಿ ಅಥವಾ ಸಂಬಂಧಪಟ್ಟ ಸಚಿವರ ಕೊಠಡಿಗಳಲ್ಲೇ ವ್ಯವಸ್ಥೆ ಮಾಡಬೇಕು ಎಂದು ಸಚಿವರ ಆಪ್ತ ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ.

ಕಲಾಪ ಚಿತ್ರೀಕರಣಕ್ಕೆ ಕೊಕ್ಕೆ: ವಿಧಾನಸಭೆಯ ಕಲಾಪದ ವಿಡಿಯೋ ಮತ್ತು ಛಾಯಾಚಿತ್ರ ಗ್ರಹಣಕ್ಕೆ ಈಗಾಗಲೇ ನಿರ್ಬಂಧ ವಿಧಿಸಲಾಗಿದೆ. ಕಲಾಪದ ನೇರ ಪ್ರಸಾರದ ಕೇಬಲ್‌ ಅನ್ನು ಸುದ್ದಿ ವಾಹಿನಿಗಳಿಗೆ ಒದಗಿಸಿಕೊಡಲಾಗಿದೆ. ಅದರ ದೃಶ್ಯಾವಳಿಗಳನ್ನು ಬಿತ್ತರಿಸಬಹುದಾಗಿದೆ. ಆದರೆ, ಕಲಾಪದ ಸಂದರ್ಭದಲ್ಲಿ ಮಹತ್ವದ ದೃಶ್ಯಾವಳಿಗಳನ್ನು ಮರೆ ಮಾಚಲಾಗುತ್ತದೆ ಎಂಬ ಟೀಕೆಯೂ ಕೇಳಿ ಬಂದಿದೆ.

ಆದರೆ, ವಿಧಾನಪರಿಷತ್ತಿನಲ್ಲಿ ವಿಡಿಯೋ ಚಿತ್ರೀಕರಣ ಮತ್ತು ಛಾಯಾಚಿತ್ರ ಸೆರೆ ಹಿಡಿಯಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಅಲ್ಲಿ ಈ ಮೊದಲಿನಂತೆಯೇ ಕಾರ್ಯನಿರ್ವಹಿಸಲು ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.