ADVERTISEMENT

ಭಾಷಾ ಹೇರಿಕೆ ಪ್ರಶ್ನಿಸದ ಮಾಧ್ಯಮ: ಪತ್ರಕರ್ತ ಪಿ. ಸಾಯಿನಾಥ್

ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಕರ್ತ ಪಿ. ಸಾಯಿನಾಥ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 23:36 IST
Last Updated 1 ಜುಲೈ 2025, 23:36 IST
<div class="paragraphs"><p>ವಾರ್ತಾ ಇಲಾಖೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಕರ್ತ ಪಿ. ಸಾಯಿನಾಥ್, ಸಿದ್ದರಾಮಯ್ಯ ಮತ್ತು ಲೇಖಕ ರಹಮತ್ ತರೀಕೆರೆ ಭಾಗವಹಿಸಿದ್ದರು&nbsp;</p></div>

ವಾರ್ತಾ ಇಲಾಖೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಕರ್ತ ಪಿ. ಸಾಯಿನಾಥ್, ಸಿದ್ದರಾಮಯ್ಯ ಮತ್ತು ಲೇಖಕ ರಹಮತ್ ತರೀಕೆರೆ ಭಾಗವಹಿಸಿದ್ದರು 

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಕಾರ್ಪೊರೇಟ್‌ ಸಂಸ್ಥೆಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ರಾಷ್ಟ್ರೀಯ ಮಾಧ್ಯಮಗಳು ಭಾಷಾ ಹೇರಿಕೆಯ ವಿರುದ್ಧ ತುಟಿ ಬಿಚ್ಚುತ್ತಿಲ್ಲ ಎಂದು ಪತ್ರಕರ್ತ ಪಿ. ಸಾಯಿನಾಥ್ ಹೇಳಿದರು.

ADVERTISEMENT

ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ನಿಜ ಸುದ್ದಿಗಾಗಿ ಸಮರ’ ವಿಷಯ ಕುರಿತು ಅವರು ಮಾತನಾಡಿದರು.

ಕಾರ್ಪೋರೇಟ್‌ ಹಿಡಿತದಲ್ಲಿರುವ ಮಾಧ್ಯಮಗಳಿಗೆ ಪ್ರಜಾಪ್ರಭುತ್ವ ಉಳಿಸುವ ಉದ್ದೇಶವಿಲ್ಲ. ಲಾಭ ಗಳಿಕೆಗಷ್ಟೇ ಅವುಗಳ ಚಿತ್ತ ಇರುತ್ತದೆ. ವೈವಿಧ್ಯತೆಯನ್ನೂ ವಿರೋಧಿಸುವ ಪರಿಪಾಟ ಆರಂಭವಾಗಿದೆ. ಅದಕ್ಕಾಗಿಯೇ ಏಕರೀತಿಯ ಚಿಂತನೆ ಬಿತ್ತುವ ಕೆಲಸವನ್ನು ಮಾಧ್ಯಮಗಳು ವ್ಯವಸ್ಥಿತವಾಗಿ ಮಾಡುತ್ತಿವೆ. ಇಂತಹ ನಡೆಯೂ ಕಾರ್ಪೋರೇಟ್‌ ಸಂಸ್ಕೃತಿಯ ಒಂದು ಭಾಗವಾಗಿದೆ ಎಂದರು.

ದೇಶದ ಶೇ 25ರಷ್ಟು ಜಿಡಿಪಿ 211 ಶ್ರೀಮಂತರ ಬಳಿ ಇದೆ. ಇವರು ಮಾಧ್ಯಮಗಳನ್ನೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಮಾಧ್ಯಮ ಸಂಸ್ಥೆಗಳು ಶ್ರೀಮಂತವಾದಷ್ಟು ವರದಿಗಳು ಬಡವಾಗುತ್ತಿವೆ. ಅಧಿಕಾರಸ್ಥರಿಗೆ ಈ ಎಲ್ಲ ಸತ್ಯವೂ ಗೊತ್ತಿದೆ. ಮಾಧ್ಯಮಗಳು ಅವರಿಗೆ ಸತ್ಯ ಹೇಳಬೇಕಿಲ್ಲ. ಮಾಧ್ಯಮಗಳಿಗೇ ಅಧಿಕಾರ ಶಕ್ತಿಯ ಅರಿವು ಮೂಡಿಸುವ ತುರ್ತು ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಲೇಖಕ ರಹಮತ್‌ ತರೀಕೆರೆ ಮಾತನಾಡಿ, ಮಾಧ್ಯಮಗಳು ಈಚಿನ ದಿನಗಳಲ್ಲಿ ಕೊಲೆಗಡುಕ ಭಾಷೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವುದು ಅತ್ಯಂತ ಕಳವಳಕಾರಿ ವಿಚಾರ. ಭಾಷೆಯನ್ನು ದ್ವೇಷಕ್ಕಾಗಿ ಬಳಕೆ ಮಾಡಬಾರದು, ಅದು ಕ್ರೌರ್ಯಕ್ಕೆ ಸಮಾನ. ಭಾಷಾ ಶುದ್ಧತೆಗೆ ಮಾಧ್ಯಗಳು ಮೊದಲ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಪತ್ರಕರ್ತರು, ಬರಹಗಾರರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಆಡಳಿತ ನಡೆಸುವ ಸರ್ಕಾರಗಳೇ ಬಹುತ್ವದ ವಿರೋಧಿ ನೀತಿ ಪ್ರದರ್ಶಿಸುತ್ತಿವೆ. ಇಂತಹ ನಡೆಯನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಿದಾಗ ಪ್ರಜಾಪ್ರಭುತ್ವದ ಉಳಿವು ಸಾಧ್ಯ ಎಂದರು. 

ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಮಂತ್ರಿ ಕಾರ್ಯದರ್ಶಿ ಬಿ.ಬಿ. ಕಾವೇರಿ, ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ವಾರ್ತಾ ಇಲಾಖೆ ಆಯುಕ್ತ ಹೇಮಂತ್‌ ನಿಂಬಾಳ್ಕರ್‌, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಉಪಸ್ಥಿತರಿದ್ದರು. 

ಸುಳ್ಳು ಸುದ್ದಿಗಳು ವಿಜೃಂಭಿಸುತ್ತಿವೆ: ಸಿದ್ದರಾಮಯ್ಯ

ನೈಜ ಸುದ್ದಿಗಾಗಿ ಹೋರಾಟ ನಡೆಸುವ ಸ್ಥಿತಿ ಎದುರಾಗಿದೆ. ಸುಳ್ಳು ಸುದ್ದಿಗಳು ವಿಜೃಂಭಿಸುತ್ತಿವೆ. ಊಹಾ ಪತ್ರಿಕೋದ್ಯಮ ಸಮಾಜ ಹಾಗೂ ಪತ್ರಿಕೋದ್ಯಮಕ್ಕೆ ಅಪಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ನಿಜ ಸುದ್ದಿಗಾಗಿ ಸಮರ’ ಸಂವಾದಕ್ಕೆ ಚಾಲನೆ ಆರೋಗ್ಯ ಸಂಜೀವಿನಿ ಯೋಜನೆ ಉದ್ಘಾಟಿಸಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ವಿತರಿಸಿ ಅವರು ಮಾತನಾಡಿದರು. ‘ಮಾಧ್ಯಮ ಸ್ವತಂತ್ರವಾಗಿ ನಿರ್ಭೀತಿಯಿಂದ ಸುದ್ದಿ ಮಾಡಬೇಕು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರೂ ಇದನ್ನೇ ನಂಬಿದ್ದರು ಮತ್ತು ಪಾಲಿಸಿದ್ದರು. ಸ್ವಾತಂತ್ರ್ಯಪೂರ್ವದಲ್ಲಿ ಜನರನ್ನು ಎಚ್ಚರಿಸುವ ಸ್ವಾತಂತ್ರ್ಯ ಹೋರಾಟದ ಪರವಾಗಿ ಪತ್ರಿಕೆಗಳು ಕೆಲಸ ಮಾಡಿದ್ದವು‘ ಎಂದರು. ‘ಸಂವಿಧಾನದ ಮೌಲ್ಯಗಳು ಮತ್ತು ಸತ್ಯವನ್ನು ಮರೆಮಾಚುವ ಕೆಲಸ ಆಗಬಾರದು. ನನ್ನ ಬಗ್ಗೆ ಎಷ್ಟು ಸುಳ್ಳು ಹೇಳಿದರೂ ಬರೆದರೂ ನಾನು ಯಾರಿಗೂ ಫೋನ್‌ ಮಾಡಿ ಕೇಳುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.