ಡಾ. ಶರಣಪ್ರಕಾಶ ಪಾಟೀಲ
ಬೆಂಗಳೂರು: ‘ವೈದ್ಯರಾಗಬೇಕೆಂಬ ಕನಸು ಹೊತ್ತು ನೀಟ್ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೋಸದ ಜಾಲಕ್ಕೆ ಬೀಳಬಾರದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಮನವಿ ಮಾಡಿದ್ದಾರೆ.
ಅತ್ಯುತ್ತಮವಾಗಿ ಓದಿ, ಪರೀಕ್ಷೆ ಬರೆದಿರುವ ಆಕಾಂಕ್ಷಿಗಳು ಹೇಗಾದರೂ ಸರಿ ಸೀಟು ಪಡೆಯಲೇಬೇಕು ಎಂಬ ಆತಂಕ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆ. ಇಂತಹವರನ್ನೇ ಬಲೆಗೆ ಹಾಕಿಕೊಳ್ಳಲು ಮಧ್ಯವರ್ತಿಗಳು ಪ್ರಯತ್ನಿಸುತ್ತಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ವೈದ್ಯಕೀಯ ಸೀಟು ಕೊಡಿಸುತ್ತೇವೆ. ಆ ಕಾಲೇಜಿನಲ್ಲಿ ಸೀಟು ಸಿಗುತ್ತದೆ. ನಮಗೆ ಅವರು ಗೊತ್ತಿದ್ದಾರೆ, ಇವರು ಗೊತ್ತಿದ್ದಾರೆ ಎಂದು ಹೇಳಿ ಸೀಟು ಕೊಡಿಸುವ ಭರವಸೆ ನೀಡಿ, ಮರುಳು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದ್ದಾರೆ.
‘ನೀಟ್ ಫಲಿತಾಂಶ ಈಗಾಗಲೇ ಪ್ರಕಟವಾಗಿವೆ. ಹೇಗಾದರೂ ಮಾಡಿ ಒಳ್ಳೆಯ ಕಾಲೇಜಿನಲ್ಲಿ ಸೀಟು ಪಡೆಯಬೇಕು ಎಂಬ ಆತುರಕ್ಕೆ ಒಳಗಾಗಬೇಡಿ. ನಿಮ್ಮ ಆತಂಕವನ್ನು ದುರುಪಯೋಗಪಡಿಸಿಕೊಳ್ಳಲು ಮಧ್ಯವರ್ತಿಗಳು ಕಾದಿರುತ್ತಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ದಲ್ಲಾಳಿಗಳಿಗೆ ಎಚ್ಚರಿಕೆ:
‘ಮೆಡಿಕಲ್ ಸೀಟ್ ಕೊಡಿಸುತ್ತೇನೆ ಎಂದು ವಿದ್ಯಾರ್ಥಿಗಳು ಅಥವಾ ಪೋಷಕರನ್ನು ದಿಕ್ಕು ತಪ್ಪಿಸಿ ಮೋಸ ಮಾಡುವವರು ಕಂಡು ಬಂದರೆ, ಅಂಥವರನ್ನು ಪತ್ತೆ ಹಚ್ಚಿ, ಕಾನೂನು ರೀತಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು. ವಿದ್ಯಾರ್ಥಿಗಳು ಮತ್ತು ಪೋಷಕರ ಭವಿಷ್ಯದ ಜತೆ ಚೆಲ್ಲಾಟ ಆಡುವುದನ್ನು ಸಹಿಸುವುದಿಲ್ಲ’ ಎಂದೂ ಅವರು ಎಚ್ಚರಿಕೆ ನೀಡಿದರು.
ಕೆಇಎಯಿಂದ ಸೀಟು ಹಂಚಿಕೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದೇ ಸೀಟುಗಳ ಹಂಚಿಕೆ ಕ್ರಮಬದ್ಧವಾಗಿ ನಡೆಯುತ್ತದೆ. ಅದರಂತೆ ನಿಯಮಗಳನ್ನು ಪಾಲಿಸಿ. ವಿದ್ಯಾರ್ಥಿಗಳು ಮತ್ತು ಪೋಷಕರು ಈ ವಿಚಾರವನ್ನು ತಪ್ಪದೇ ತಿಳಿದುಕೊಳ್ಳಬೇಕು ಎಂದು ಶರಣ ಪ್ರಕಾಶ್ ಪಾಟೀಲ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.