ಬೆಂಗಳೂರು: ‘ಆ.14ರಂದು ನಡೆದ ಮೆಗಾ ಲೋಕ ಅದಾಲತ್‌ನಲ್ಲಿ 3.88 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ವಿಚ್ಛೇದನ ಬಯಸಿದ್ದ 74 ಜೋಡಿ ಮತ್ತೆ ಒಂದಾದರೆ, ಮದುವೆ ಮುರಿದುಕೊಂಡಿದ್ದ ದಂಪತಿ ಮರು ಮದುವೆಗೂ ನಿರ್ಧರಿಸಿದ್ದಾರೆ’ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಅರವಿಂದ ಕುಮಾರ್ ತಿಳಿಸಿದರು.
‘ಎಲ್ಲ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳಿಂದ ಪಡೆದ ಅಂಕಿ–ಅಂಶಗಳ ಪ್ರಕಾರ, 4,213 ವ್ಯಾಜ್ಯ ಪೂರ್ವ ಪ್ರಕರಣಗಳು ಮತ್ತು 21,836 ಬಾಕಿ ಪ್ರಕರಣಗಳನ್ನು ವರ್ಚುವಲ್ ಮಾದರಿಯಲ್ಲಿ ವಿಲೇವಾರಿ ಮಾಡಲಾಗಿದೆ. ವಿವಾಹ ಸಂಬಂಧಿತ ಒಟ್ಟು 9,815 ಪ್ರಕರಣಗಳನ್ನು ಗುರುತಿಸಿ, 1,166 ಪ್ರಕರಣ ಇತ್ಯರ್ಥ ಮಾಡಲಾಗಿದೆ. ಸಮಾಲೋಚನೆ ನಡೆಸಿದ್ದರಿಂದ 74 ದಂಪತಿಗಳು ಮತ್ತೆ ಒಂದಾಗಿದ್ದಾರೆ. ಮೈಸೂರಿನಲ್ಲಿ ವೈವಾಹಿಕ ಸಂಬಂಧ ಮುರಿದುಕೊಂಡಿದ್ದ ದಂಪತಿ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಸಮ್ಮುಖದಲ್ಲಿ ಮರುಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಒಂದೇ ದಿನ ಇಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದು ದಾಖಲೆ. ವಾರಾಂತ್ಯದ ಕರ್ಫ್ಯೂ ಇದ್ದ ಕಾರಣ 8 ಜಿಲ್ಲೆಗಳಲ್ಲಿ ಹಲವು ವಕೀಲರು ಲೋಕ ಅದಾಲತ್‌ಗೆ ಹಾಜರಾಗಲು ಸಾಧ್ಯವಾಗಿಲ್ಲ. ಅಂತಹ ಕಡೆ ಸೋಮವಾರ ವಿಶೇಷ ಅದಾಲತ್ ಆಯೋಜಿಸಲಾಗಿತ್ತು ಎಂದು ತಿಳಿಸಿದರು.
ಒಟ್ಟು 2,884 ಆಸ್ತಿ ಹಂಚಿಕೆ ಮೊಕದ್ದಮೆಗಳು, 2,434 ಮರಣದಂಡನೆ ಪ್ರಕರಣಗಳು, 10,522 ಕ್ರಿಮಿನಲ್ ಪ್ರಕರಣಗಳು ಮತ್ತು ನೆಗೋಶಿಯಬಲ್ ಇನ್‌ಸ್ಟ್ರುಮೆಂಟ್ ಕಾಯ್ದೆಯಡಿ 7,378 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಇದರ ಜೊತೆಗೆ, 1,028 ಭೂ ಸ್ವಾಧೀನ ಹಕ್ಕು ಪ್ರಕರಣ ಪರಿಹರಿಸಲಾಗಿದೆ ಮತ್ತು ಸುಮಾರು ₹100 ಕೋಟಿ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.