ADVERTISEMENT

‘ಮೇಕೆದಾಟು ಡಿ.ಪಿ.ಆರ್. ಅನುಮೋದನೆ ಷರತ್ತುಬದ್ಧ’

​ಪ್ರಜಾವಾಣಿ ವಾರ್ತೆ
Published 12 ಜನವರಿ 2019, 19:30 IST
Last Updated 12 ಜನವರಿ 2019, 19:30 IST

ನವದೆಹಲಿ: ಮೇಕೆದಾಟು ಯೋಜನೆಗೆ ಸಂಬಂಧಿಸಿದ ವಿವರ ಯೋಜನಾ ವರದಿ (ಡಿ.ಪಿ.ಆರ್.) ತಯಾರಿಸಲು ಕೇಂದ್ರ ಸರ್ಕಾರ ನೀಡಿರುವ ತಾತ್ವಿಕ ಅನುಮೋದನೆ ಬೇಷರತ್ತಿನದಲ್ಲ. ಕಾವೇರಿ ನದಿ ನೀರಿಗೆ ಸಂಬಂಧಿಸಿದ ಅಂತರರಾಜ್ಯ ವಿವಾದಗಳನ್ನು ಕರ್ನಾಟಕ ಸೌಹಾರ್ದಯುತವಾಗಿ ಬಗೆಹರಿಸಿಕೊಂಡರೆ ಮಾತ್ರ ಈ ಯೋಜನೆಯ ಜಾರಿ ಸಾಧ್ಯ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಈ ಷರತ್ತುಬದ್ಧ ಅನುಮೋದನೆಯು ಕೇವಲ ಡಿ.ಪಿ.ಆರ್. ತಯಾರಿಕೆಗೆ ಸೀಮಿತವೇ ವಿನಾ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅಥವಾ ಕೇಂದ್ರೀಯ ಜಲ ಆಯೋಗ ನೀಡಿರುವ ಸಮ್ಮತಿ ಅಲ್ಲ ಎಂದು ಪ್ರಮಾಣಪತ್ರವೊಂದರಲ್ಲಿ ಸ್ಪಷ್ಟಪಡಿಸಲಾಗಿದೆ.

ತನ್ನೊಂದಿಗೆ ಸಮಾಲೋಚಿಸಿಲ್ಲ ಎಂಬ ತಮಿಳುನಾಡಿನ ವಾದದಲ್ಲಿ ಸತ್ಯಾಂಶವಿಲ್ಲ. ಯೋಜನೆಯ ಸಾಧ್ಯಾಸಾಧ್ಯತೆಯ ವರದಿಯನ್ನು ಕಳೆದ ಆಗಸ್ಟ್ 24ರಂದೇ ತಮಿಳುನಾಡಿನೊಂದಿಗೆ ಹಂಚಿಕೊಳ್ಳಲಾಗಿದೆ ಎಂದೂ ಕೇಂದ್ರ ಸರ್ಕಾರ ಹೇಳಿದೆ.

ADVERTISEMENT

ಕುಡಿಯುವ ನೀರು ಪೂರೈಕೆಗಾಗಿ ಕಾವೇರಿ ನದಿಗೆ ಅಡ್ಡವಾಗಿ ನಿರ್ಮಿಸುವ ಮೇಕೆದಾಟು ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 67.16 ಟಿ.ಎಂ.ಸಿ.ಅಡಿಗಳು. ಉದ್ದೇಶಿತ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ 400 ಮೆಗಾವಾಟ್. ಅಂದಾಜು ವೆಚ್ಚ ₹5,912 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.