ADVERTISEMENT

ಮೇಕೆದಾಟು: ರಾಜ್ಯಕ್ಕೆ ಜಲ ಆಯೋಗದ ಬಲ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2018, 19:16 IST
Last Updated 27 ನವೆಂಬರ್ 2018, 19:16 IST

ಬೆಂಗಳೂರು: ಕುಡಿಯುವ ನೀರು ಪೂರೈಕೆ ಹಾಗೂ ವಿದ್ಯುತ್ ಉತ್ಪಾದನಾ ಉದ್ದೇಶದ ಮೇಕೆದಾಟು ಯೋಜನೆಯ ಸಾಧ್ಯತಾ ವರದಿಗೆ ಕೇಂದ್ರ ಜಲ ಆಯೋಗ ಸಹಮತ ವ್ಯಕ್ತಪಡಿಸಿದ್ದು, ರಾಜ್ಯದ ಬೇಡಿಕೆಗೆ ಬಲ ಬಂದಿದೆ.

ರಾಜ್ಯ ಜಲಸಂಪನ್ಮೂಲ ಇಲಾಖೆ ಸಲ್ಲಿಸಿದ್ದ ವರದಿಗೆ ಒಪ್ಪಿಗೆ ಸೂಚಿಸಿರುವ ಆಯೋಗ, ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ಸೂಚಿಸಿದೆ. ತಮಿಳುನಾಡಿಗೆ ಪ್ರತಿ ವರ್ಷ ಬಿಡುವ ನೀರಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಎಚ್ಚರವಹಿಸಬೇಕು ಎಂದೂ ಸಲಹೆ ನೀಡಿದೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಂಗಳವಾರ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ‘ಮೇಕೆದಾಟು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಇದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಗಡಿ ಭಾಗದಲ್ಲಿ ಯೋಜನೆ ಅನುಷ್ಠಾನ ಮಾಡುವುದರಿಂದ ಕೃಷಿಗೆ ನೀರು ಬಳಸಲು ಸಾಧ್ಯವಾಗುವುದಿಲ್ಲ. ಪಕ್ಕದ ರಾಜ್ಯಕ್ಕೆ ಬಿಡುವ ನೀರಿನಲ್ಲಿಯೂ ಯಾವುದೇ ವ್ಯತ್ಯಾಸವೂ ಆಗುವುದಿಲ್ಲ. ತಮಿಳುನಾಡು ಬಯಸಿದರೆಮಾತುಕತೆಗೆ ನಾವು ಸದಾ ಸಿದ್ಧ’ ಎಂದರು.

ADVERTISEMENT

2013ರಲ್ಲಿ ಕಾಂಗ್ರೆಸ್ ನೇತೃತ್ವ‌ದ ಸರ್ಕಾರ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿತ್ತಲ್ಲದೇ, ಕೇಂದ್ರ ಜಲ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ತಮಿಳು ನಾಡು ವಿರೋಧಿಸಿದ್ದರಿಂದಾಗಿ ಯೋಜನೆಗೆ ಹಿನ್ನಡೆಯಾಗಿತ್ತು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಯೋಜನೆಗೆ ಅನುಮೋದನೆ ನೀಡುವಂತೆ ಕೋರಿದ್ದರು.

***

ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಮಾಜಿ ಮುಖ್ಯಮಂತ್ರಿಗಳು, ಮಾಜಿ ನೀರಾವರಿ ಸಚಿವರ ಸಭೆ ಡಿ. 6ರಂದು ನಡೆಯಲಿದೆ. ಅಲ್ಲಿ ಚರ್ಚಿಸುತ್ತೇವೆ

-ಡಿ.ಕೆ. ಶಿವಕುಮಾರ್‌, ಜಲಸಂಪನ್ಮೂಲ ಸಚಿವ

ಬಹುದಿನಗಳ ಕನಸಿನ ಯೋಜನೆಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರ ಸಬೂಬುಗಳನ್ನು ಹೇಳದೇ ಅನುಷ್ಠಾನ ಮಾಡಬೇಕು

-ಬಿ.ಎಸ್. ಯಡಿಯೂರಪ್ಪ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.