ADVERTISEMENT

ಮೇಕೆದಾಟು: ಒತ್ತಡಕ್ಕೆ ಮಣಿಯದಂತೆ ಡಾ. ರಾಜ್‌ ಕುಮಾರ್ ಅಭಿಮಾನಿಗಳ ಕರೆ

ಅಖಿಲ ಕರ್ನಾಟಕ ಡಾ. ರಾಜ್‌ ಕುಮಾರ್ ಅಭಿಮಾನಿಗಳ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 12:58 IST
Last Updated 5 ಆಗಸ್ಟ್ 2021, 12:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕುಡಿಯುವ ನೀರನ್ನು ಒದಗಿಸುವ ಮೇಕೆದಾಟು ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಬಾರದು. ಒತ್ತಡಗಳಿಗೆ ಮಣಿಯದೆಯೇ ರಾಜ್ಯ ಸರ್ಕಾರವು ಇದನ್ನು ಆದಷ್ಟು ಬೇಗ ಅನುಷ್ಠಾನ ಮಾಡಬೇಕು’ ಎಂದು ಅಖಿಲ ಕರ್ನಾಟಕ ಡಾ. ರಾಜ್‌ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಆಗ್ರಹಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡಬಾರದೆಂದು ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಈ ಹಿಂದೆ ಐಪಿಎಸ್ ಅಧಿಕಾರಿಯಾಗಿ ಇಲ್ಲಿ ಕಾರ್ಯನಿರ್ವಹಿಸಿದ್ದ ಅವರು, ಈಗ ರಾಜಕೀಯ ಲಾಭಕ್ಕಾಗಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯ ಹಿಂದೆ ಸರಿಯಬಾರದು. ಪಕ್ಷಾತೀತವಾಗಿ ಹೋರಾಟ ನಡೆಸಬೇಕು‘ ಎಂದರು.

ಕಲಾವಿದ ’ಮುಖ್ಯಮಂತ್ರಿ‘ ಚಂದ್ರು, ‘ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ 2018ರಲ್ಲಿಯೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಕೇಂದ್ರ ಸರ್ಕಾರ ಕೂಡ ತಾತ್ವಿಕ ಒಪ್ಪಿಗೆ ನೀಡಿದೆ. ಈ ಯೋಜನೆಯಿಂದ ನಮಗೆ ಅಂತಿಮವಾಗಿ 4.75 ಟಿಎಂಸಿ ಅಡಿ ಕುಡಿಯುವ ನೀರು ದೊರೆಯಲಿದೆ. ಉಳಿದ ನೀರು ತಮಿಳುನಾಡಿಗೆ ಹೋಗಲಿದೆ. ಅನಗತ್ಯವಾಗಿ ಅವರು ಕ್ಯಾತೆ ತೆಗೆಯುತ್ತಿದ್ದಾರೆ. ನಮ್ಮ ನೆಲ, ಜಲವನ್ನು ಅವರು ನಿರಂತರ ಕಬಳಿಸುತ್ತಾ ಬಂದಿದ್ದಾರೆ. ಹಾಗಾಗಿ, ಯೋಜನೆ ಅನುಷ್ಠಾನದ ವಿಚಾರವಾಗಿ ಧ್ವನಿಯೆತ್ತಬೇಕಾಗಿದೆ. ನಮ್ಮ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದರು.

ADVERTISEMENT

ಲೇಖಕಿ ಬಿ.ಟಿ. ಲಲಿತಾ ನಾಯಕ್, ‘ಯೋಜನೆಗೆ ಜಲ ಆಯೋಗ ಕೂಡ ಅನುಮತಿ ನೀಡಿದೆ. ಈ ಯೋಜನೆ ಅನುಷ್ಠಾನದಿಂದ ತಮಿಳುನಾಡಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಬಸವರಾಜ ಬೊಮ್ಮಾಯಿ ಅವರು ಯೋಜನೆ ಅನುಷ್ಠಾನದಿಂದ ಹಿಂದೆ ಸರಿಯಬಾರದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.