ADVERTISEMENT

‘ದೇಶದಲ್ಲಿ ವಿಚಾರದ ಹೆಸರಲ್ಲಿ ವಿಕಾರ ತುಂಬುವ ಕೆಲಸ’: ಬರಗೂರು ರಾಮಚಂದ್ರಪ್ಪ ವಿಷಾದ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 3:46 IST
Last Updated 7 ಡಿಸೆಂಬರ್ 2018, 3:46 IST
ಬೆಳಗಾವಿಯ ಸದಾಶಿವನಗರ ಸ್ಮಶಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನದ ಅಂಗವಾಗಿ ಗುರುವಾರ ನಡೆದ ಮೌಢ್ಯ ವಿರೋಧಿ ಪರಿವರ್ತನಾ ದಿನಾಚರಣೆಯಲ್ಲಿ ಸೋಪಾನ ಜಾಂಬೋಜಿ–ರೇಖಾ ಹಿರೇಬಾಗೇವಾಡಿ ಅಂತರ್ಜಾತಿ ಸರಳ ವಿವಾಹ ನೆರವೇರಿತು. ಮಹಾರಾಷ್ಟ್ರ ಉಸ್ತರಿಮಠದ ವಿಶ್ವನಾಥ ಕೋರಣೇಶ್ವರ ಅಪ್ಪ ಸ್ವಾಮೀಜಿ, ಪ್ರಾಧ್ಯಾಪಕಿ ಮೀನಾಕ್ಷಿ ಬಾಳಿ, ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನದಾಸ್, ಶಾಸಕ ಸತೀಶ ಜಾರಕಿಹೊಳಿ, ಚಿಂತಕ ಬರಗೂರು ರಾಮಚಂದ್ರಪ್ಪ, ಮಾನವ ಬಂಧುತ್ವ ವೇದಿಕೆ ಸಂಚಾಲಕ ರವೀಂದ್ರ ನಾಯ್ಕರ ಇದ್ದಾರೆ‌
ಬೆಳಗಾವಿಯ ಸದಾಶಿವನಗರ ಸ್ಮಶಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನದ ಅಂಗವಾಗಿ ಗುರುವಾರ ನಡೆದ ಮೌಢ್ಯ ವಿರೋಧಿ ಪರಿವರ್ತನಾ ದಿನಾಚರಣೆಯಲ್ಲಿ ಸೋಪಾನ ಜಾಂಬೋಜಿ–ರೇಖಾ ಹಿರೇಬಾಗೇವಾಡಿ ಅಂತರ್ಜಾತಿ ಸರಳ ವಿವಾಹ ನೆರವೇರಿತು. ಮಹಾರಾಷ್ಟ್ರ ಉಸ್ತರಿಮಠದ ವಿಶ್ವನಾಥ ಕೋರಣೇಶ್ವರ ಅಪ್ಪ ಸ್ವಾಮೀಜಿ, ಪ್ರಾಧ್ಯಾಪಕಿ ಮೀನಾಕ್ಷಿ ಬಾಳಿ, ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನದಾಸ್, ಶಾಸಕ ಸತೀಶ ಜಾರಕಿಹೊಳಿ, ಚಿಂತಕ ಬರಗೂರು ರಾಮಚಂದ್ರಪ್ಪ, ಮಾನವ ಬಂಧುತ್ವ ವೇದಿಕೆ ಸಂಚಾಲಕ ರವೀಂದ್ರ ನಾಯ್ಕರ ಇದ್ದಾರೆ‌   

ಬೆಳಗಾವಿ: ‘ದೇಶದಲ್ಲಿ ವಿಚಾರದ ಹೆಸರಲ್ಲಿ ವಿಕಾರ ತುಂಬುವ ಕೆಲಸ ನಡೆಯುತ್ತಿದೆ’ ಎಂದು ಚಿಂತಕ ಬರಗೂರು ರಾಮಚಂದ್ರಪ್ಪ ವಿಷಾದ ವ್ಯಕ್ತಪಡಿಸಿದರು.

‌ಡಾ.ಬಿ.ಆರ್. ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನದ ಅಂಗವಾಗಿ ಮಾನವ ಬಂಧುತ್ವ ವೇದಿಕೆಯಿಂದ ಇಲ್ಲಿನ ಸದಾಶಿವನಗರದ ಸ್ಮಶಾನದಲ್ಲಿ ಗುರುವಾರ ಆಯೋಜಿಸಿದ್ದ ಮೌಢ್ಯ ವಿರೋಧಿ ಪರಿವರ್ತನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇದು ವಿವೇಕಾನಂದರ ಕಾಲವಲ್ಲ. ವಿವಾದಾನಂದರ, ವಿಕಾರಾನಂದರ ಕಾಲದಲ್ಲಿದ್ದೇವೆ. ವಿಚಾರಗಳನ್ನು ವಿಕಾರಗಳನ್ನಾಗಿ ಮಾಡಲಾಗುತ್ತಿದೆ. ಕೆಲವರು ವಿವೇಕಾನಂದರನ್ನು ಹೈಜಾಕ್ ಮಾಡಿದ್ದು, ಅವರನ್ನು ವಿಮೋಚನೆಗೊಳಿಸಬೇಕಾಗಿದೆ. ಮತಕ್ಕಾಗಿ ಅಪಹರಣಕ್ಕೆ ಒಳಗಾಗಿರುವ ಅಂಬೇಡ್ಕರ್‌ ಅವರನ್ನೂ ಬಿಡುಗಡೆ ಮಾಡಬೇಕಾಗಿದೆ’ ಎಂದು ಹೇಳಿದರು.

ADVERTISEMENT

ಮಠೀಯತೆ ಆಕ್ರಮಿಸಿಕೊಂಡಿದೆ: ‘ಚಿಂತನೆಗಳಲ್ಲಿ ಇರುವ ಮೌಢ್ಯದ ಬೇರನ್ನು ಅಲುಗಾಡಿಸಿದರೆ, ಆಚರಣೆಯಲ್ಲಿರುವ ಮೌಢ್ಯಗಳು ಕಡಿಮೆಯಾಗುತ್ತಾ ಹೋಗುತ್ತವೆ. ಹೀಗಾಗಿ, ಚಿಂತನಾ ಕ್ರಮದಲ್ಲಿರುವ ಮೌಢ್ಯ ವಿರೋಧಿಸಬೇಕು’ ಎಂದು ತಿಳಿಸಿದರು.

‘ಇಂದು ಮಾನವೀಯತೆಯ ಜಾಗವನ್ನು ಮತೀಯತೆ,‌ ಮಠೀಯತೆ ಆಕ್ರಮಿಸಿಕೊಂಡಿದೆ’ ಎಂದು ವಿಶ್ಲೇಷಿಸಿದ ಅವರು, ‘20ನೇ ಶತಮಾನ ಆತ್ಮವಿಶ್ವಾಸದ ಶತಮಾನವಾಗಿತ್ತು. ಆದರೆ, 21ನೇ ಶತಮಾನ ಶರಣಾಗತಿಯ ಶತಮಾನವಾಗಿದೆ. ಕಾರ್ಪೊರೇಟ್ ಕಂಪನಿಗಳ ಎದುರು ಮಂಡಿಯೂರಿ ಕೂರುವಂಥ ಸ್ಥಿತಿ ಬಂದಿದೆ. ವಿಚ್ಛಿದ್ರೀಕರಣ ಶಕ್ತಿ ಜಾಸ್ತಿಯಾಗುತ್ತಿದೆ. ಸತ್ಯಕ್ಕೇ ಸಾಕ್ಷಿ ಕೇಳುವಂಥ ಕಾಲವಿದು. ಸುಳ್ಳಿಗೆ ಸಾಕ್ಷಿ ಬೇಕಾಗಿಲ್ಲ ಎನ್ನುವಂತಾಗಿದೆ’ ಎಂದು ತಿಳಿಸಿದರು.

‘ಒಡೆದ ನಾಡಿನ ಒಳಗೆ ನಿಂತು ಒಗ್ಗಟ್ಟು ಬಯಸುತ್ತಿದ್ದೇವೆ.‌ ಪ್ರತಿಗಾಮಿಗಳು ಹಾಗೂ ಮೂಲಭೂತವಾದಿಗಳಲ್ಲಿ ಒಗ್ಗಟ್ಟಿದೆ. ಆದರೆ, ಅವರನ್ನು ವಿರೋಧಿಸುವ ಪ್ರಗತಿಪರರಲ್ಲಿ ಒಡಕಿದೆ. ಈ ನಿಟ್ಟಿನಲ್ಲಿ ನಾವು ಯೋಚಿಸಬೇಕು. ಒಡಕನ್ನು ಒಗ್ಗಟ್ಟು ಮಾಡುವ ಸವಾಲು‌ ನಮ್ಮ ಮುಂದಿದೆ. ಹೀಗಾಗಿ ಮೌಢ್ಯತೆಯ ವಿಷಯದಲ್ಲಿ ಜನಸಾಮಾನ್ಯರನ್ನು ದೂರ ಮಾಡಬಾರದು’ ಎಂದು ಸಲಹೆ ನೀಡಿದರು.

ಶಕ್ತಿಕೇಂದ್ರಗಳ ವಿರುದ್ಧ ಹೋರಾಡಬೇಕು:‘ಧಾರ್ಮಿಕ ಮೂಲಭೂತವಾದ ದೊಡ್ಡ ‌ಮೌಢ್ಯ. ಅದರ ಬೇರುಗಳನ್ನು ಅಲುಗಾಡಿಸಬೇಕು. ಮೌಢ್ಯ ಮಾರುಕಟ್ಟೆಯಾಗಿದೆ. ಅಲ್ಲಿ ಧರ್ಮ, ದೇವರು ಹಾಗೂ ಸಂಸ್ಕೃತಿಯನ್ನು ಸರಕುಗಳನ್ನಾಗಿಟ್ಟು ಮಾರಲಾಗುತ್ತಿದೆ. ಈ ಮೌಢ್ಯದ ಮಾರುಕಟ್ಟೆಯಿಂದ ಜನರನ್ನು ಹೊರತರಬೇಕಾಗಿದೆ. ಇದಕ್ಕಾಗಿ ಮೌಢ್ಯಗಳನ್ನು ದುರುಪಯೋಗ ಮಾಡಿಕೊಳ್ಳುವ ಶಕ್ತಿಕೇಂದ್ರಗಳ ವಿರುದ್ಧ ಹೋರಾಡಬೇಕು’ ಎಂದು ಪ್ರತಿಪಾದಿಸಿದರು.

‘ಜಾತಿ, ಪಕ್ಷ, ಧರ್ಮದ ಚೌಕಟ್ಟಿನಲ್ಲಿ ಇದ್ದರೂ ಅದರಾಚೆ ನಿಂತು ನೋಡುವ ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ನಾಯಕತ್ವ ಇಂದು ಬೇಕಾಗಿದೆ. ಅಸ್ಪೃಶ್ಯತೆ ಆಚರಿಸುವ ದೇವಸ್ಥಾನಗಳಿಗೆ ನಾವು ಬರುವುದಿಲ್ಲ ಎನ್ನುವ ಧೈರ್ಯವನ್ನು ಜನಪ್ರತಿನಿಧಿಗಳು ತೋರಬೇಕು’ ಎಂದು ಆಶಿಸಿದರು.

‘ಸಂವಿಧಾನ ಬದಲಾಯಿಸುತ್ತೇವೆ ಎಂದು ಕೇಂದ್ರ ಸಚಿವರೊಬ್ಬರು ಹೇಳುತ್ತಾರೆ. ಆದರೆ, ಯಾವುದೇ ಕಾರಣಕ್ಕೂ ಸಂವಿಧಾನ ಬದಲಾಯಿಸಲು ಆಗುವುದಿಲ್ಲ. ಅದಕ್ಕೆ ಜನರು ಬಿಡುವುದಿಲ್ಲ’ ಎಂದರು.

‘ದೇಶದ ನಾಯಕರ ನಡುವೆ ಪ್ರತಿಮಾ ಸ್ಥಾಪನಾ ಸ್ಪರ್ಧೆ ನಡೆಯುತ್ತಿದೆ. ಸೀತೆ ಹಾಗೂ ಲಕ್ಷ್ಮಣನಿಲ್ಲದ ರಾಮನ ಪ್ರತಿಮೆ ನಿಲ್ಲಿಸಲು ಮುಂದಾಗಿದ್ದಾರೆ. ಸಹಿಷ್ಣುತೆ (ಸೀತೆ), ಸಹೋದರತೆ (ಲಕ್ಷ್ಮಣ) ಇಲ್ಲದ ಪ್ರತಿಮಾ ವಿಧಾನದಿಂದ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.