ADVERTISEMENT

ಗಣಿಬಾಧಿತ ಪ್ರದೇಶ ಪುನರುಜ್ಜೀವನಕ್ಕೆ ₹17 ಸಾವಿರ ಕೋಟಿ

ಸಚಿವ ಸಂಪುಟ ಸಭೆ ಒಪ್ಪಿಗೆ * 10 ವರ್ಷಗಳಲ್ಲಿ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 20:15 IST
Last Updated 19 ನವೆಂಬರ್ 2018, 20:15 IST
   

ಬೆಂಗಳೂರು: ಗಣಿಗಾರಿಕೆಯಿಂದ ನಲುಗಿರುವ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜನರ ಬದುಕನ್ನು ಮರಳಿ ಕಟ್ಟುವ; ನಾಶವಾಗಿರುವ ಪರಿಸರ ಪುನರುಜ್ಜೀವನಗೊಳಿಸುವ ₹17 ಸಾವಿರ ಕೋಟಿಯ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಹಿಂದೆ ಯೋಜನೆಯನ್ನು ಕೇಂದ್ರ ಉನ್ನತಾಧಿಕಾರ ಸಮಿತಿಗೆ (ಸಿಇಸಿ) ಸಲ್ಲಿಸಲಾಗಿತ್ತು. ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈಗ ಮತ್ತೆ ಸಿಇಸಿಗೆ ಸಲ್ಲಿಸಲಾಗುತ್ತದೆ. ಒಪ್ಪಿಗೆ ಸಿಗುವ ವಿಶ್ವಾಸ ಇದೆ. 10 ವರ್ಷಗಳ ಅವಧಿಯಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಗಣಿ ಬಾಧಿತ ಪ್ರದೇಶದ ಪುನಃಶ್ಚೇತನಕ್ಕೆ ಗಣಿ ಉದ್ಯಮಿಗಳಿಂದ ಸಂಗ್ರಹಿಸಲಾಗಿರುವ ಮೊತ್ತದಿಂದ ಈ ಯೋಜನೆ ಕೈಗೊಳ್ಳಲಾಗುವುದು. ಆರೋಗ್ಯ, ಶಿಕ್ಷಣ, ಗುಣಮಟ್ಟದ ಗಾಳಿ, ಉತ್ತಮ ರಸ್ತೆ, ರೈಲು ಸಂಪರ್ಕ, ಕೃಷಿ, ಪರಿಸರ ಸಂರಕ್ಷಣೆ, ಶುದ್ಧ ಕುಡಿಯುವ ನೀರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರಗಳಿಗೆ ಈ ಹಣ ಬಳಸಬೇಕು ಎಂಬ ವಿಸ್ತೃತ ಮಾರ್ಗಸೂಚಿ ಇದೆ. ಇದನ್ನು ಮೂಲವಾಗಿಟ್ಟುಕೊಂಡು ಸಮಗ್ರ ಯೋಜನೆ ರೂಪಿಸಲಾಗಿದೆ.

ADVERTISEMENT

ಕೃಷ್ಣಾ–ಸಚಿವ ಸಂಪುಟ ಉಪಸಮಿತಿ: ‘ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3ರ ಭೂಸ್ವಾಧೀನ ಪ್ರಕ್ರಿಯೆ ಜಟಿಲವಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸಬೇಕಿದೆ. ಭೂ ಪರಿಹಾರ ದರ ನಿಗದಿಪಡಿಸುವ ಕುರಿತಂತೆ ಪರಿಶೀಲಿಸಿ ಸೂಕ್ತ ಶಿಫಾರಸು ಮಾಡಲು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಲು ನಿರ್ಧರಿಸಲಾಗಿದೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಸಂಪುಟದ ಇತರ ತೀರ್ಮಾನಗಳು:

*ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆ ಆವರಣದಲ್ಲಿ ₹45 ಕೋಟಿ ವೆಚ್ಚದಲ್ಲಿ 120 ಹಾಸಿಗೆ ಸಾಮರ್ಥ್ಯದ ಹೊಸ ಬ್ಲಾಕ್‌ ಕಟ್ಟಡ ನಿರ್ಮಿಸಲು ರಾಜ್ಯ ಸರ್ಕಾರ ₹22.5 ಕೋಟಿ ನೀಡಲಿದೆ.

*ರಾಯಚೂರು ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಯ ಆವರಣದಲ್ಲಿ 520 ಹಾಸಿಗೆಗಳ ಹೊಸ ಆಸ್ಪತ್ರೆ ಕಟ್ಟಡ ನಿರ್ಮಿಸಲು ₹32 ಕೋಟಿ.

*114 ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಡಯಾಲಿಸಿಸ್‌ ಕೇಂದ್ರಗಳಿವೆ. ಖಾಸಗಿ ಸಹಭಾಗಿತ್ವದಲ್ಲಿ ಇನ್ನೂ 57 ಕಡೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಇದಕ್ಕೆ ₹54.5 ಕೋಟಿ ಅನುದಾನ.

*ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಂಕನಾಡಿಯಲ್ಲಿ ಶಿಥಿಲಗೊಂಡಿರುವ ಮಾರುಕಟ್ಟೆ ಸಂಕೀರ್ಣದ ಮರುನಿರ್ಮಾಣಕ್ಕೆ ₹41.50 ಕೋಟಿ.

*ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕನಕಪುರ ತಾಲ್ಲೂಕುಗಳಿಗೆ ಕುಡಿಯುವ ನೀರು ಸರಬರಾಜಿಗೆ ಸತ್ಯಗಾಲ ಸಮೀಪದಲ್ಲಿ ಕಾವೇರಿ ನದಿಯಿಂದ ಇಗ್ಗಲೂರು ಸಮೀಪದ ಎಚ್‌.ಡಿ.ದೇವೇಗೌಡ ಬ್ಯಾರೇಜ್‌ಗೆ ಗುರುತ್ವಾಕರ್ಷಣೆ ಮೂಲಕ ನೀರು ಹರಿಸಲು ₹540 ಕೋಟಿ.

*ಹಾಸನ ಜಿಲ್ಲೆಯ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆಗೆ ₹19.33 ಕೋಟಿ, ಪಾಲಿಟೆಕ್ನಿಕ್‌ಗೆ ₹16.15 ಕೋಟಿ.

*ಭಾಲ್ಕಿ ನಗರದಲ್ಲಿ ನ್ಯಾಯಾಂಗ ಸಂಕೀ‌ರ್ಣ ಕಟ್ಟಡಕ್ಕೆ ₹13.20 ಕೋಟಿ ಹಾಗೂ ಪುತ್ತೂರು ತಾಲ್ಲೂಕಿನ ಬನ್ನೂರು ಗ್ರಾಮದ ಆನೆಮಜಲಿನಲ್ಲಿ ನ್ಯಾಯಾಂಗ ಸಂಕೀರ್ಣಕ್ಕೆ ₹25 ಕೋಟಿ.

*ಸ್ಮಾರ್ಟ್‌ ಪೊಲೀಸಿಂಗ್‌ ಯೋಜನೆಗೆ ₹32.89 ಕೋಟಿ.

*ರಾಮನಗರ ತಾಲ್ಲೂಕಿನ ಬೈರಮಂಗಲ ಜಲಾಶಯಕ್ಕೆ ಡೈವರ್ಷನ್‌ ಕಾಲುವೆ ಹಾಗೂ ವಿಯರ್‌ ನಿರ್ಮಿಸುವ ₹110 ಕೋಟಿ ಯೋಜನೆಗೆ ಅನುಮೋದನೆ.

*ಉಳ್ಳಾಲ ನಗರಸಭೆ, ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಾಗೂ ಮಾರ್ಗದ ಗ್ರಾಮಗಳಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ನೇತ್ರಾವತಿ ನದಿ ನೀರು ಸರಬರಾಜಿನ ₹198 ಕೋಟಿ ಯೋಜನೆಗೆ ಒಪ್ಪಿಗೆ.

ಲೋಕಾಯುಕ್ತರ ವಿರುದ್ಧ ಉಪಲೋಕಾಯುಕ್ತ ತನಿಖೆ!

ಲೋಕಾಯುಕ್ತರ ವಿರುದ್ಧ ದೂರುಗಳು ದಾಖಲಾದರೆ ಅಂತಹ ಪ್ರಕರಣಗಳನ್ನು ಇನ್ನು ಮುಂದೆ ಉಪಲೋಕಾಯುಕ್ತರು ತನಿಖೆ ನಡೆಸಲಿದ್ದಾರೆ.

ಈ ಸಂಬಂಧ ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ)–2018 ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಯಾವುದೇ ಪ್ರಕರಣದ ಬಗ್ಗೆ ತನಿಖೆ ನಡೆಸಲು ತಾವು ಅನರ್ಹರು ಎಂದು ಲೋಕಾಯುಕ್ತರು ಭಾವಿಸಿದರೆ ಅದನ್ನು ಉಪಲೋಕಾಯುಕ್ತರಿಗೆ ಹಸ್ತಾಂತರ ಮಾಡಬಹುದು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ಭಾಸ್ಕರ್‌ ರಾವ್‌ ಅವರ ಪುತ್ರ ಅಶ್ವಿನ್‌ ರಾವ್‌ ವಿರುದ್ಧ ಈ ಹಿಂದೆ ಆರೋಪ ಕೇಳಿ ಬಂದಿತ್ತು. ಇಂತಹ ಸಂದರ್ಭಗಳಲ್ಲಿ ಯಾರು ತನಿಖೆ ನಡೆಸಬೇಕು ಎಂಬ ಬಗ್ಗೆ ಲೋಕಾಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಗಣಿ ಕಂಪನಿ ಕಚೇರಿಗಳ ಮೇಲೆ ಐ.ಟಿ ದಾಳಿ

ಸಂಡೂರು (ಬಳ್ಳಾರಿ ಜಿಲ್ಲೆ): ಸಂಡೂರಿನಲ್ಲಿನ ವೆಸ್ಕೊ, ಎಸ್‌.ಕೆ.ಎಂ.ಇ, ವಿ.ಎನ್.ಕೆ.ಮೆನನ್, ಬಸವೇಶ್ವರ ಎಂಟರ್‌ಪ್ರೈಸಸ್ ಹಾಗೂ ಫಮೆಂಟೊ ಗಣಿ ಕಂಪನಿಗಳ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ 35ಕ್ಕೂ ಹೆಚ್ಚು ಅಧಿಕಾರಿಗಳು ಸೋಮವಾರ ದಾಳಿ ಮಾಡಿದ್ದು, ಲೆಕ್ಕಪತ್ರಗಳ ಪರಿಶೀಲನೆ ರಾತ್ರಿಯೂ ಮುಂದುವರಿದಿತ್ತು. ವೆಸ್ಕೊ ಮುಂತಾದ ಗಣಿ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.