ADVERTISEMENT

ಮನೆಗೆ ತೆರಳಿ ಪಾಠ ಮಾಡುವ ಶಿಕ್ಷಕ: ಸಚಿವರ ಶ್ಲಾಘನೆ

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವಿಶೇಷ ವರದಿಗೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 11:05 IST
Last Updated 18 ಜುಲೈ 2020, 11:05 IST
ಶಿಕ್ಷಕ ಹಣಮಂತ ಕಾತರಕಿ
ಶಿಕ್ಷಕ ಹಣಮಂತ ಕಾತರಕಿ   

ತಿಕೋಟಾ ‌(ವಿಜಯಪುರ): ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶಾಲೆ ಆರಂಭವಾಗದೇ ಇರುವುದರಿಂದ ಮನೆಯಲ್ಲೇ ಇರುವ ಮಕ್ಕಳನ್ನು ಹುಡುಕಿಕೊಂಡು ಹೋಗಿ ಪಾಠ ಮಾಡುವ ಕೆಂಗಲಗುತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಣಮಂತ ಕಾತರಕಿಗೆ ಶಿಕ್ಷಣ ಸಚಿವರು, ಅಧಿಕಾರಿಗಳು ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಶನಿವಾರ ಪ್ರಕಟವಾಗಿದ್ದ ‘ಮನೆಗೆ ತೆರಳಿ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕ’ ಎಂಬ ವಿಶೇಷ ವರದಿಯನ್ನು ಓದಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌, ‘ತಾವು ಮಾಡುತ್ತಿರುವ ಸಾಹಸದ ಕಾಯಕದಿಂದ ನನಗೆ ಮನಸ್ಸು ತುಂಬಿ ಬಂದಿದೆ. ನಿಮ್ಮಂತ ಶಿಕ್ಷಕರು ನಮ್ಮ ಸಮಾಜಕ್ಕೆ ಆಸ್ತಿ, ತುಂಬಾ ಒಳ್ಳೆಯ ಕಾರ್ಯ ಮಾಡುತ್ತಿದ್ದಿರಿ, ಹೀಗೆ ಮುಂದುವರೆಸಿ, ನಿಮ್ಮಂತೆಯೇ ಇನ್ನೂ ಹಲವಾರು ಶಿಕ್ಷಕರು ಸಮಾಜದಲ್ಲಿ ಹೊರಹೊಮ್ಮಲಿ’ ಎಂದು ಆಶಿಸಿದ್ದಾರೆ.

ಶಿಕ್ಷಕ ಕಾತರಕಿ

ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ವಿಶೇಷ ವರದಿಯನ್ನು ಟ್ಯಾಗ್‌ ಮಾಡಿರುವ ಸಚಿವರು, ಶಿಕ್ಷಕ ಹಣಮಂತ ಕಾತರಕಿ ಮಕ್ಕಳ ಕಲಿಕೆಗೆ ಪೂರಕವಾಗುವ ವಿಡಿಯೊ, ಅಕ್ಷರ, ಚಿತ್ರ ಕಥೆ, ಅಂಕಿಗಳ ಚಿತ್ರಗಳನ್ನು ಮೊಬೈಲ್‌ ಮೂಲಕ ಪಾಲಕರಿಗೆ ಕಳುಹಿಸಿ, ಒಂದರಿಂದ ಮೂರನೇ ತರಗತಿ ಮಕ್ಕಳಿಗೆ ಅಕ್ಷರ ಜ್ಞಾನ ಮೂಡಿಸುವ ಕಾರ್ಯ ಮೆಚ್ಚುವಂತದು’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಆಯುಕ್ತರಿಂದ ಅಭಿನಂದನೆ: ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ವಿಭಾಗದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರೂ ಸಹ ಕರೆ ಮಾಡಿ, ‘ತಾವು ಮಕ್ಕಳ ಕುರಿತು ಒಳ್ಳೆಯ ಕೆಲಸ ಮಾಡಿದ್ದಿರಿ, ಎಲ್ಲ ಶಿಕ್ಷಕರು ನಿಮ್ಮಂತೆಯೇ ಕಾರ್ಯ ಮಾಡಿದರೆ ಮಕ್ಕಳ ಭವಿಷ್ಯ ಒಳ್ಳೆಯದಾಗಲಿದೆಎಂದು ಹೇಳಿ ಶುಭ ಹಾರೈಸಿದ್ದಾರೆ.

ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅವರೂ ಸಹ ಫೋನ್‌ ಕರೆ, ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.