ADVERTISEMENT

ಕೋವಿಡ್‌: ನಿಯಮ ಉಲ್ಲಂಘಿಸುವ ಕಲ್ಯಾಣ ಮಂಟಪಗಳಿಗೆ ಬೀಗ -ಸಚಿವ ಆರ್‌.ಅಶೋಕ

ಹೇಳಿಕೆ: ಪ್ರತಿದಿನ 70 ಸಾವಿರ ಮಂದಿಗೆ ಕೋವಿಡ್‌ ಲಸಿಕೆ ಗುರಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 11:33 IST
Last Updated 10 ಏಪ್ರಿಲ್ 2021, 11:33 IST
ಆರ್.ಅಶೋಕ್
ಆರ್.ಅಶೋಕ್   

ಬೆಂಗಳೂರು: ‘ನಗರದಲ್ಲಿ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸುವ ಕಲ್ಯಾಣ ಮಂಟಪಗಳಿಗೆ 6 ತಿಂಗಳು ಬೀಗ ಹಾಕಲಾಗುವುದು. ಈ ಕುರಿತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ದಕ್ಷಿಣ ವಲಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿ ಸುಬ್ರಹ್ಮಣ್ಯ, ಕೃಷ್ಣಪ್ಪ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ, ಹಿರಿಯ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಪ್ರಮುಖರ ಜೊತೆ ಶನಿವಾರ ಸಭೆ ನಡೆಸಿ ಅವರು ಚರ್ಚಿಸಿದರು.

‘ದಕ್ಷಿಣ ವಲಯದಲ್ಲಿ 45 ವರ್ಷ ಮೇಲ್ಪಟ್ಟವರು ಒಟ್ಟು 7.5 ಲಕ್ಷ ಮಂದಿ ಇದ್ದಾರೆ. ಈ ಪೈಕಿ 2.5 ಲಕ್ಷ ಜನ ಈಗಾಗಲೇ ಲಸಿಕೆ ಪಡೆದಿದ್ದಾರೆ. ಉಳಿದ 5 ಲಕ್ಷ ಮಂದಿಗೆ ಮುಂದಿನ 15 ದಿನಗಳಲ್ಲಿ ಲಸಿಕೆ ಸಿಗುವಂತಾಗಬೇಕು. ಈ ಉದ್ದೇಶ ಈಡೇರಬೇಕಾದರೆ ಪ್ರತಿದಿನ 70 ಸಾವಿರ ಜನರಿಗೆ ಲಸಿಕೆ ಕೊಡಲೇಬೇಕು. ದಕ್ಷಿಣ ಕ್ಷೇತ್ರದಲ್ಲಿ ಸದ್ಯ 500 ಲಸಿಕಾ ಕೇಂದ್ರಗಳಿವೆ. ಇದನ್ನು 1,000ಕ್ಕೆ ಹೆಚ್ಚಿಸಿ. ಈ ಕಾರ್ಯಕ್ಕಾಗಿ ನನ್ನ ಕಚೇರಿಯನ್ನೂ (ಶಾಸಕರ) ಬಳಸಿಕೊಳ್ಳಿ’ ಎಂದು ದಕ್ಷಿಣ ವಲಯದ ಉಸ್ತುವಾರಿಯೂ ಆಗಿರುವ ಅಶೋಕ, ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

‘ಕೋವಿಡ್‌ ಲಸಿಕೆಯ ಮಹತ್ವ, ಎಲ್ಲೆಲ್ಲಿ ಲಸಿಕಾ ಕೇಂದ್ರಗಳಿವೆ ಎಂಬುದರ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು. ಈ ಸಂಬಂಧ ಕರಪತ್ರಗಳನ್ನು ಮುದ್ರಿಸಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಪತ್ರಿಕೆಗಳಿಗೂ ಕಡ್ಡಾಯವಾಗಿ ಜಾಹೀರಾತು ನೀಡಬೇಕು. ಜೊತೆಗೆ ಆಟೊಗಳ ಮೂಲಕ ಬೀದಿ ಬೀದಿಗಳಲ್ಲಿ ಪ್ರಚಾರ ಮಾಡಿಸಬೇಕು. ಇನ್ನು ಎರಡು ದಿನಗಳೊಳಗೆ ಈ ಕೆಲಸ ಆಗಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಕೊರೊನಾ ಸೋಂಕಿತರು ಗಾಬರಿಪಡುವ ಅಗತ್ಯವಿಲ್ಲ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಗುಣಮಟ್ಟದ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸೋಂಕಿತರ ಪೈಕಿ ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅಂತಹವರ ಕೈ ಮೇಲೆ ಮುದ್ರೆ ಹಾಕಬೇಕೆ, ಬೇಡವೆ ಎಂಬುದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದೇವೆ. ಎಲ್ಲರೂ ತಮ್ಮ ಮನೆಗಳಲ್ಲೇ ಯುಗಾದಿ ಹಬ್ಬ ಆಚರಿಸಬೇಕು. ಹಬ್ಬದ ನೆಪ ಹೇಳಿ ಗುಂಪು ಸೇರಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

‘ಖಾಸಗಿ ಆಸ್ಪತ್ರೆಯವರು ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ಸರ್ಕಾರದ ಜೊತೆ ಕೈಜೋಡಿಸಬೇಕು. ಹೆಚ್ಚಿನ ಹಾಸಿಗೆಗಳನ್ನು ಮೀಸಲಿಡಬೇಕು. ಹಾಸಿಗೆ ಇಲ್ಲ ಎಂಬ ಕಾರಣ ನೀಡಿ ಯಾವ ರೋಗಿಯನ್ನೂ ಬೇರೆಡೆಗೆ ಕಳುಹಿಸಕೂಡದು. ಆಸ್ಪತ್ರೆಯ ಸಿಬ್ಬಂದಿ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಬಿಬಿಎಂಪಿ ಮುಖ್ಯ ಅಯುಕ್ತರು, ಸಂಸದರು ಹಾಗೂ ಸಂಬಂಧಪಟ್ಟ ಶಾಸಕರ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಸಂಸದ ತೇಜಸ್ವಿ ಸೂರ್ಯ ‘ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಜನರಿರುವ ಪ್ರದೇಶಗಳಲ್ಲಿ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿಲ್ಲ. ಅಂತಹ ಪ್ರದೇಶಗಳಿಗೆ ಭೇಟಿ ನೀಡಿ ಅರಿವು ಮೂಡಿಸಬೇಕು. ಖಾಸಗಿ ಆಸ್ಪತ್ರೆಗಳು ಹತ್ತಿರದಲ್ಲಿರುವ ಅಪಾರ್ಟ್‌ಮೆಂಟ್‌ ನಿವಾಸಿ ಸಂಘಗಳ ಸಹಕಾರದೊಂದಿಗೆ ಅಲ್ಲಿನ ಜನರಿಗೆ ಲಸಿಕೆ ನೀಡಲು ಮುಂದಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.