ADVERTISEMENT

ಎಚ್‌ಡಿಕೆ ಮತ್ತು ಚಲುವರಾಯಸ್ವಾಮಿ ನಡುವೆ ‘ಜೋಕರ್‌’ ಜಗಳ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 12:35 IST
Last Updated 8 ಏಪ್ರಿಲ್ 2025, 12:35 IST
   

ಮಂಡ್ಯ: ‘ಚಲುವರಾಯಸ್ವಾಮಿ ನೂರಕ್ಕೆ ನೂರರಷ್ಟು ಜೋಕರ್. ಜೋಕರ್ ಸಂಸ್ಕೃತಿ ಶುರುವಾಗಿದ್ದು ಕಾಂಗ್ರೆಸ್ ಪಕ್ಷದಿಂದ ಎನ್ನುವುದನ್ನು ಆ ವ್ಯಕ್ತಿ ಮರೆಯಬಾರದು. ಅವರು ಎಲ್ಲಿದ್ದರು? ಆಮೇಲೆ ಎಲ್ಲೆಲ್ಲಿ ಹೋದರು? ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು. 

‘ಆತ ನನ್ನನ್ನು ಸಿಎಂ ಮಾಡಿದ ಎನ್ನುವುದು ಬಹುದೊಡ್ಡ ಜೋಕ್. ಶಾಸಕರು ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ಎಂಬುದನ್ನು ಆ ವ್ಯಕ್ತಿ ಮರೆಯಬಾರದು’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಸಚಿವ ಚಲುವರಾಯಸ್ವಾಮಿ ಅವರನ್ನು ಟೀಕಿಸಿದರು. 

ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣಕ್ಕೆ ಆಹ್ವಾನ ನೀಡಿರುವ ಕೃಷಿ ಸಚಿವರ ಸವಾಲಿಗೆ ಪ್ರತಿಕ್ರಿಯಿಸಿ, ‘ನಾನು ಆಣೆ ಮಾಡಲು ತಯಾರಿದ್ದೇನೆ. ನಾನು ಸಿಎಂ ಆಗುವಾಗ ಎಂಎಲ್‌ಎಗಳು ಆ ವ್ಯಕ್ತಿಯನ್ನು ನೋಡಿ ಬಂದ್ರಾ? ಆ ವ್ಯಕ್ತಿಯನ್ನು ಮಂತ್ರಿ ಮಾಡಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬೆಳಗಿನ ಜಾವ ಮೂರು ಗಂಟೆವರೆಗೆ ನಿದ್ರೆ ಮಾಡಲು ಬಿಡುತ್ತಿರಲಿಲ್ಲ ಆ ಆಸಾಮಿ’ ಎಂದರು. 

ADVERTISEMENT

‘ಆ ವ್ಯಕ್ತಿಗೆ ಇರುವ ಚಟ ನನಗೆ ಇಲ್ಲ. ಮಂಡ್ಯದಲ್ಲಿ ಆತನ ಚಟಗಳ ಬಗ್ಗೆ ಕೇಳಿದರೆ ಜನ ಹಾದಿ ಬೀದಿಯಲ್ಲಿ ಹೇಳುತ್ತಾರೆ. ಈ ಮನುಷ್ಯ ಎಷ್ಟು ಮನೆ ಹಾಳು ಮಾಡಿದ್ದಾರೆ ಎಂಬುದು ನನಗೆ ಗೊತ್ತು’ ಎಂದರು. 

ಮೈತ್ರಿ ಭದ್ರವಾಗಿದೆ, ಸಮಸ್ಯೆ ಇಲ್ಲ:

‘ಜೆಡಿಎಸ್‌ - ಬಿಜೆಪಿ ಮೈತ್ರಿ ಭದ್ರವಾಗಿದೆ. ಯಾರಿಗೂ ಸಂಶಯ ಬೇಡ. ಜೆಡಿಎಸ್‌ - ಬಿಜೆಪಿ‌ ಮೈತ್ರಿ ಸಮನ್ವಯ ಸಮಿತಿ ರಚನೆ ಆಗಬೇಕೆಂದು ಡಿ.ವಿ. ಸದಾನಂದಗೌಡರೇ ಹೇಳಿದ್ದಾರೆ. ಹಲವಾರು ಹಿರಿಯ ನಾಯಕರೂ ಸಮನ್ವಯ ಸಮಿತಿ ಆಗಬೇಕು ಎಂದು ಸಲಹೆ ಮಾಡಿದ್ದಾರೆ. ಮೈತ್ರಿಗೆ ಯಾವುದೇ ರೀತಿಯ ಧಕ್ಕೆ ಇಲ್ಲ’ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಆಡಳಿತಕ್ಕಾಗಿ ಎಚ್‌ಡಿಕೆ ಜೋಕರ್‌: ಚಲುವರಾಯಸ್ವಾಮಿ ತಿರುಗೇಟು

ಮಂಡ್ಯ: ‘ರಮ್ಮಿ ಆಟದಲ್ಲಿ ಜೋಕರ್ ಅನ್ನು ಯಾವುದಕ್ಕಾದರೂ ಸೇರಿಸಬಹುದು. ಆಡಳಿತಕ್ಕಾಗಿ ಯಾರ ಜತೆ ಬೇಕಾದರೂ ಹೋಗುವ ಕುಮಾರಸ್ವಾಮಿ ಜೋಕರಾ? ಅಥವಾ ನಾನು ಜೋಕರಾ?. ಆದ್ದರಿಂದ ಆ ಪದಕ್ಕೆ ಅವರೇ ಹೆಚ್ಚು ಸೂಕ್ತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು. 

ಮಂಗಳವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಐಐಟಿ ಪದಕ್ಕೆ ಅರ್ಥ ಗೊತ್ತಿದೆಯೇ’ ಎನ್ನುವ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ ‘ಮಂಡ್ಯಕ್ಕೆ ಐಐಟಿ ತರಲು ಅವರು ಪತ್ರ ಬರೆದಿದ್ದಾರಾ?. ಅವರ ತಂದೆ ಪ್ರಧಾನಮಂತ್ರಿ, ನನ್ನ ತಂದೆ ರೈತ. ನಾನು ಜಿ.ಪಂ. ಸದಸ್ಯನಿಂದ ರಾಜಕಾರಣ ಮಾಡಿದ್ದೇನೆ. ನನಗೆ ಜನರ ಕಷ್ಟ ಗೊತ್ತಿದೆ. ಅವರು ನನ್ನ ಮಂತ್ರಿ ಮಾಡಿದ್ದೇನೆ ಎನ್ನುವುದಾದರೆ, ನಾನು ಅವರನ್ನು ಸಿಎಂ ಮಾಡಿದ್ದೀನಿ ಎನ್ನುವುದು ತಪ್ಪಲ್ಲ’ ಎಂದರು. 

ಕುಮಾರಸ್ವಾಮಿಯಿಂದ ರಾಜಕಾರಣ ಕಲಿಯುವ ಅವಶ್ಯಕತೆ ನನಗಿಲ್ಲ. ಎಚ್‌ಡಿಕೆ ಅವರನ್ನು ನಾಯಕರನ್ನಾಗಿ ಮಾಡಲು ನಾವು ಸಾಥ್ ಕೊಟ್ವಾ, ಇಲ್ವಾ ಎನ್ನುವುದನ್ನು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುತ್ತಾರಾ?. ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯ, ಡಿಕೆಶಿ ಮತ್ತು ನನ್ನನ್ನು ಬೈಯ್ಯುವ ಚಪಲ. ಆದ್ದರಿಂದ ಅವರ ಬಗ್ಗೆ ಮಾತನಾಡಿ ನಾಲಗೆ ಹೊಲಸು ಮಾಡಿಕೊಳ್ಳಲು ಇಷ್ಟವಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.