ADVERTISEMENT

ತಪ್ಪು ಮುಚ್ಚಿಕೊಳ್ಳಲು ಕಾರಜೋಳರಿಂದ ಸುಳ್ಳು: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 19:31 IST
Last Updated 12 ಜನವರಿ 2022, 19:31 IST
ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ   

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನದ ವಿಚಾರದಲ್ಲಿ ಬಿಜೆಪಿ ಸರ್ಕಾರದ ತಪ್ಪು ಮುಚ್ಚಿಕೊಳ್ಳುವ ಸಲುವಾಗಿ ಜಲ‌ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ದಾಖಲೆಗಳನ್ನು ತಿರುಚಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಆರಂಭಿಸಲಾಗಿತ್ತು. 2017ರ ಮಾರ್ಚ್ 13ರಂದು ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಸಂಪುಟ ಸಭೆ ಒಪ್ಪಿಗೆ ನೀಡಿತ್ತು. 2017ರ ಜೂನ್ 7ರಂದು ಕೇಂದ್ರ ಜಲ ಆಯೋಗಕ್ಕೆ ಡಿಪಿಆರ್ ಸಲ್ಲಿಸಲಾಗಿತ್ತು’ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

ಡಿಪಿಆರ್ ಸಲ್ಲಿಸುವ ವಿಚಾರದಲ್ಲಿ ಕಾರಜೋಳ ಆಧಾರರಹಿತ ಆರೋಪ ಮಾಡಿದ್ದಾರೆ. 2017ರಲ್ಲಿ ಕೇಂದ್ರ ಜಲ ಆಯೋಗದ ಮಾರ್ಸೂಚಿಗಳನ್ನು ಬದಲಾವಣೆ ಮಾಡಲಾಯಿತು. ಬದಲಾದ ಮಾರ್ಗಸೂಚಿ ಪ್ರಕಾರ, ಪೂರ್ವಭಾವಿ ಕಾರ್ಯಸಾಧ್ಯತಾ ವರದಿ (ಪಿಎಫ್ಆರ್) ಸಲ್ಲಿಸುವಂತೆ ಆಯೋಗ ನಿರ್ದೇಶನ ನೀಡಿತ್ತು. ಅದರಂತೆ 2017ರ ಅಕ್ಟೋಬರ್ 9ರಂದು ಕೇಂದ್ರ ಜಲ ಆಯೋಗಕ್ಕೆ ಪಿಎಫ್ಆರ್ ಸಲ್ಲಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಯಾವ ಲೋಪವೂ ಆಗಿಲ್ಲ ಎಂದರು.

ADVERTISEMENT

ಜೆಡಿಎಸ್–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಲ‌ ಸಂಪನ್ಮೂಲ‌ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಕೂಡ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ದರು. ಹೊಸ ದರದ ಅನುಸಾರ ಪರಿಷ್ಕೃತ ಡಿಪಿಆರ್ ಸಿದ್ಧಪಡಿಸಿ ಸಲ್ಲಿಸಿದ್ದರು. ಕೇಂದ್ರ ಜಲ ಸಂಪನ್ಮೂಲ ಸಚಿವರನ್ನೂ ಭೇಟಿಯಾಗಿ ಯೋಜನೆಗೆ ಒಪ್ಪಿಗೆ ನೀಡುವಂತೆ ಒತ್ತಡ ಹೇರಿದ್ದರು ಎಂದು ಹೇಳಿದರು.

2015ರ ಮಾರ್ಚ್‌ನಲ್ಲೇ ಸರ್ವಪಕ್ಷಗಳ ನಾಯಕರ ನಿಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕರೆದೊಯ್ದಿದ್ದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೇಕೆದಾಟು ಯೋಜ
ನೆಗೆ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿದ್ದರು. ವಿವಾದ ಇತ್ಯರ್ಥಕ್ಕೆ ಕರ್ನಾಟಕ, ತಮಿಳುನಾಡು ಮತ್ತು ಪುದುಚ್ಚೇರಿ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಮನವಿ‌ ಮಾಡಲಾಗಿತ್ತು. ಈವರೆಗೆ ಪ್ರಧಾನಿ ಏನನ್ನೂ ಮಾಡಿಲ್ಲ ಎಂದು ದೂರಿದರು.

ಮೇಕೆದಾಟು ಯೋಜನೆ ಪ್ರಸ್ತಾವ ಈಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದಿದೆ. ಪ್ರಾಧಿಕಾರದ ಒಪ್ಪಿಗೆ ಮತ್ತು ಕೇಂದ್ರ ಪರಿಸರ ಇಲಾಖೆಯ ಅನುಮತಿ ಮಾತ್ರ ಬಾಕಿ ಇವೆ. ಪ್ರಾಧಿಕಾರದ ಐದು ಸಭೆಗಳಲ್ಲಿ ಚರ್ಚೆಯೇ ಇಲ್ಲದೆ ವಿಷಯ ಮುಂದೂಡಲಾಗಿದೆ. ತ್ವರಿತವಾಗಿ ಅನುಮತಿ ಪಡೆಯುವಲ್ಲಿ ರಾಜ್ಯದ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

‘ಅನಾಮಧೇಯ ಜಾಹೀರಾತು ಕೊಟ್ಟ ಕಾರಜೋಳ’

ಈಗಿನ ಜಲ ಸಂಪನ್ಮೂಲ ಸಚಿವ ಕಾರಜೋಳ ಅವರು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ. ಸರ್ಕಾರದ ಟಿಪ್ಪಣಿ ಹಾಳೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು, ಅನಾಮಧೇಯ ಜಾಹೀರಾತು ಪ್ರಕಟಿಸುವಂತಹ ಕೆಟ್ಟ ಮಾದರಿ ಅನುಸರಿಸುತ್ತಿದ್ದಾರೆ ಎಂದುಎಂ.ಬಿ. ಪಾಟೀಲ ಟೀಕಿಸಿದರು.

‘ಗೋವಿಂದ ಕಾರಜೋಳ ಅವರು ದಾಖಲೆಗಳಿಲ್ಲದೆ ಆರೋಪ ಮಾಡುತ್ತಿದ್ದಾರೆ. ನನ್ನ ಬಳಿ ಇರುವ ದಾಖಲೆಗಳನ್ನು ಅವರಿಗೆ ಕಳುಹಿಸುವೆ. ಮೇಧಾವಿಗಳೂ, ಅನುಭವಿಗಳೂ ಆದ ಅವರು ದಾಖಲೆ ನೋಡಿ ಪ್ರತಿಕ್ರಿಯಿಸಲಿ’ ಎಂದರು.

‘ಪ್ರಧಾನಿ ಬಳಿ ಅಧಿಕಾರವಿದೆ’

‘ತೆಲುಗು ಗಂಗಾ ಯೋಜನೆಗೆ ಇದ್ದ ತೊಡಕುಗಳನ್ನು ಆಗಿನ ಪ್ರಧಾನಿ ಇಂದಿರಾ ಗಾಂಧಿ ಒಂದೇ ಮಾತುಕತೆಯಲ್ಲಿ ಪರಿಹರಿಸಿದ್ದರು. ಈಗಲೂ ಪ್ರಧಾನಿ ನರೇಂದ್ರ ಮೋದಿ ಹಾಗೆ ಮಾಡಲು ಅವಕಾಶವಿದೆ. ಆದರೆ, ಅವರೇಕೆ ಮಾಡಲಿಲ್ಲ’ ಎಂದು ಬಿ.ಎಲ್‌.ಶಂಕರ್‌ ಪ್ರಶ್ನಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಮೇಕೆದಾಟು ವಿಚಾರದಲ್ಲಿ ಸರ್ವ ಪಕ್ಷಗಳ ನಾಯಕರ ಸಭೆ ಕರೆದು ಚರ್ಚಿಸಬಹುದಿತ್ತು. ಯಾವುದನ್ನೂ ಮಾಡದೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.