ADVERTISEMENT

‘ಮ್ಯಾನೇಜ್ ಮಾಡ್ತಿದ್ದೀವಿ ಎಂದಿರಬಹುದು’: ಆಡಿಯೊ ಸಂಭಾಷಣೆ ಒಪ್ಪಿಕೊಂಡ ಮಾಧುಸ್ವಾಮಿ

ಸಿ.ಎಂ ಕೇಳಿದರೆ ರಾಜೀನಾಮೆ ಕೊಡಲು ಸಿದ್ಧ– ಸಚಿವ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 21:11 IST
Last Updated 16 ಆಗಸ್ಟ್ 2022, 21:11 IST
ಜೆ.ಸಿ. ಮಾಧುಸ್ವಾಮಿ
ಜೆ.ಸಿ. ಮಾಧುಸ್ವಾಮಿ   

ತುಮಕೂರು: ‘ಸರ್ಕಾರ ನಡೀತಾ ಇಲ್ಲ. ಮ್ಯಾನೇಜ್‌ ಮಾಡ್ತಾ ಇದ್ದೀವಿ ಅಂಥ ನಾನು ಹೇಳಿರಬಹುದು. ಯಾರ ಜತೆ ಮಾತಾಡಿದ್ದೇನೆ, ಯಾವಾಗ ಮಾತನಾಡಿದ್ದೇನೆ ಎಂಬುದು ನನಗೆ ಗೊತ್ತಿಲ್ಲ’ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

‘ಸರ್ಕಾರ ನಡೀತಾ ಇಲ್ಲ. ಇಲ್ಲಿ, ಮ್ಯಾನೇಜ್‌ ಮಾಡ್ತಾ ಇದ್ದೀವಿ ಅಷ್ಟೇ. ತಳ್ಳಿದರೆ ಸಾಕಷ್ಟೆ. ಎಂಟು ತಿಂಗಳಷ್ಟೆ ಅಂತ ತಳ್ತಾ ಇದೀವಿ ಕಣಪ್ಪಾ’ ಎಂದು ಚನ್ನಪಟ್ಟಣದ ವ್ಯಕ್ತಿಯೊಬ್ಬರ ಜತೆ ಮಾತನಾಡುವ ಸಮಯದಲ್ಲಿ ಹೇಳಿರುವ ಆಡಿಯೊ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಈ ಬಗ್ಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಜೆ.ಸಿ.ಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಎಲ್ಲಾ ಅಶಕ್ತರು, ಯಾರೂ ಕೆಲಸ ಮಾಡುತ್ತಿಲ್ಲ ಅಂತ ಹೇಳಿಲ್ಲ‌. ಡಿಸಿಸಿ ಬ್ಯಾಂಕ್‌ನಲ್ಲಿ ಹೆಚ್ಚುವರಿಯಾಗಿ ಬಡ್ಡಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದು ನಿಜ. ಕರೆ ಮಾಡಿದ ವ್ಯಕ್ತಿ ಜತೆ ಮುಂದಕ್ಕೆ ಮಾತನಾಡುವ ಸಮಯದಲ್ಲಿ ಏನೋ ಹೇಳಿರಬಹುದು. ನೀವು ಸರ್ಕಾರ ನಡಿಸ್ತಿಲ್ಲ ಅಂಥ ಅವನು ಕೇಳಿರಬಹುದು. ಆಗ ನಾನು ಆ ರೀತಿ ಹೇಳಿರಬಹುದು’ ಎಂದು ಸಮಜಾಯಿಷಿ ನೀಡಿದರು.

ADVERTISEMENT

‘ಸರ್ಕಾರದಲ್ಲಿ ಇದ್ದುಕೊಂಡು ಈ ರೀತಿ ಹೇಳಲು ಆಗುತ್ತದೆಯೆ? ಮೂರನೇ ವ್ಯಕ್ತಿ ಜತೆ ಸರ್ಕಾರ ನಡಿತಿಲ್ಲ ಎಂದು ಹೇಳುವಂತಹ ಪರಿಸ್ಥಿತಿ ಇಲ್ಲ. ಯಾವಾಗ ಮಾತನಾಡಿದ್ದು ನೆನಪಿಲ್ಲ. ಆದರೆ ಈಗ ಏಕೆ ಆಡಿಯೊ ವೈರಲ್ ಆಗಿದೆ ಎಂಬುದು ಗೊತ್ತಿಲ್ಲ’ ಎಂದು ತಿಳಿಸಿದರು.

ರಾಜೀನಾಮೆಗೆ ಸಿದ್ಧ: ‘ನಾನು ನನ್ನ ಸಹೋದ್ಯೋಗಿಗಳು ಕೇಳುತ್ತಾರೆ ಎಂದು ರಾಜೀನಾಮೆ ಕೊಡಬೇಕಾಗಿಲ್ಲ. ಮುಖ್ಯಮಂತ್ರಿ ಕೇಳಿದರೆ ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಮಾತನಾಡಿದ್ದು, ಯಾವ ಸಮಯ, ಸಂದರ್ಭದಲ್ಲಿ ಮಾತನಾಡಿದ್ದೇನೆ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದೇನೆ’ ಎಂದರು.

ಮಾಧುಸ್ವಾಮಿ ಹೇಳಿಕೆಗೆ ಅಪಾರ್ಥಬೇಡ: ಬೊಮ್ಮಾಯಿ
‘ಸರ್ಕಾರ ನಡೀತಾ ಇಲ್ಲ. ಮ್ಯಾನೇಜ್‌ ಮಾಡ್ತಾ ಇದ್ದೀವಷ್ಟೇ’ ಎಂಬ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಈ ಹೇಳಿಕೆ ಬಗ್ಗೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಚಿವರು ಬೇರೆ ಯಾವುದೋ ಸಂದರ್ಭದಲ್ಲಿ ಮಾತನಾಡಿದ್ದಾರೆ. ಈ ಬಗ್ಗೆ ಅವರ ಬಳಿ ಈ ಬಗ್ಗೆ ನಾನು ಮಾತನಾಡಿದ್ದೇನೆ. ಆದ್ದರಿಂದ ತಪ್ಪು ಅರ್ಥ ಕಲ್ಪಿಸಬೇಕಾಗಿಲ್ಲ. ಮೂರು ತಿಂಗಳ ಹಿಂದೆ ಸಹಕಾರ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ್ದು. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸರ್ಕಾರದಲ್ಲಿ ಎಲ್ಲವೂ ಸರಿ ಇದೆ’ ಎಂದು ಬೊಮ್ಮಾಯಿ ಹೇಳಿದರು.

ಮಾಧುಸ್ವಾಮಿ ಹೇಳಿಕೆ ಬಗ್ಗೆ ಸಂಪುಟದ ಸದಸ್ಯರಾದ ಎಸ್‌.ಟಿ.ಸೋಮಶೇಖರ್‌ ಮತ್ತು ಮುನಿರತ್ನ ಅವರು ಹರಿಹಾಯ್ದಿದ್ದರು. ಮುನಿರತ್ನ ಅವರು ರಾಜೀನಾಮೆಗೂ ಒತ್ತಾಯಿಸಿದ್ದರು.

ಮಾಧುಸ್ವಾಮಿ ಹೇಳಿದ್ದು ತಪ್ಪು: ಈಶ್ವರಪ್ಪ
ಸಚಿವ ಮಾಧುಸ್ವಾಮಿ ಆ ರೀತಿ ಹೇಳಿರುವುದು ತಪ್ಪು. ಅವರು ಕಾನೂನನ್ನು ಚೆನ್ನಾಗಿ ಅರಿತಿರುವವರು. ಯಾವ ಅರ್ಥದಲ್ಲಿ ಆ ಮಾತು ಹೇಳಿದ್ದಾರೋ ಗೊತ್ತಿಲ್ಲ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

‘ಈ ವಿಚಾರವಾಗಿ ನಾನು ಅವರ ಜತೆ ಖಾಸಗಿಯಾಗಿ ಮಾತನಾಡುತ್ತೇನೆ’ ಎಂದೂ ಅವರು ತಿಳಿಸಿದರು.

‘ಡಿಸಿಸಿ ಬ್ಯಾಂಕ್‌ ತನಿಖೆಗೆ ಸೂಚನೆ: ಸೋಮಶೇಖರ್‌
‘ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಅವರು ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಡಿಸಿಸಿ ಬ್ಯಾಂಕ್‌ಗಳ ಕುರಿತು ತನಿಖೆ ನಡೆಸುವಂತೆ ಸಹಾಯಕ ರಿಜಿಸ್ಟ್ರಾರ್‌ಗೆ ಸೂಚಿಸಲಾಗಿದೆ’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

‘ಈ ಬ್ಯಾಂಕ್‌ಗಳಲ್ಲಿ ಅಕ್ರಮಗಳು ನಡೆದಿರುವುದು ಸಾಬೀತಾದರೆ ಕ್ರಮ ಕೈಗೊಳ್ಳುತ್ತೇವೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ’ ಎಂದುಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಸರ್ಕಾರವನ್ನು ಯಾವ ರೀತಿ ಮ್ಯಾನೇಜ್‌ ಮಾಡಲಾಗುತ್ತಿದೆ ಎನ್ನುವ ಹೇಳಿಕೆ ಕುರಿತು ಮಾಧುಸ್ವಾಮಿ ಅವರನ್ನೇ ಕೇಳಬೇಕು. ಆಗ ನನಗೂ ಅರ್ಥವಾಗುತ್ತದೆ. ಯಾವ ಉದ್ದೇಶದಿಂದ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ ಎನ್ನುವುದು ಗೊತ್ತಿಲ್ಲ’ ಎಂದರು.

‘ಬೊಮ್ಮಾಯಿ ಸರ್ಕಾರ ಕಳೆದ ಒಂದು ವರ್ಷದಲ್ಲಿ ಯಾವುದೇ ರೀತಿಯಲ್ಲಿ ಮ್ಯಾನೇಜ್‌ ಮಾಡುತ್ತಿರುವುದನ್ನು ನಾನು ನೋಡಿಲ್ಲ. ಅಂತಹ ಒಂದು ಪ್ರಕರಣವೂ ಇಲ್ಲ. ಕಾನೂನು ಸಚಿವರಾಗಿರುವ ಮಾಧುಸ್ವಾಮಿ ಅವರು ಯಾವ ಸನ್ನಿವೇಶ ಮತ್ತು ಸಂದರ್ಭದಲ್ಲಿ ಹೇಳಿದರು ಎನ್ನುವುದನ್ನು ಅವರನ್ನೇ ಕೇಳಿದರೆ ಗೊತ್ತಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.