ADVERTISEMENT

ಅಲೆಮಾರಿಗಳ ವಸತಿ ಯೋಜನೆ ಅನುದಾನ ವಾಪಸ್‌ ಇಲ್ಲ: ಭರವಸೆ ನೀಡಿದ ಸಚಿವ ಪೂಜಾರಿ

ಪ್ರಜಾವಾಣಿ ವರದಿ ಪರಿಣಾಮ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 18:23 IST
Last Updated 31 ಜನವರಿ 2022, 18:23 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಬೆಂಗಳೂರು: ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌.ಟಿ) ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ವಸತಿರಹಿತ ಕುಟುಂಬಗಳಿಗೆ ವಸತಿ ಕಲ್ಪಿಸಲು ವಿಶೇಷ ಯೋಜನೆಯಡಿ ಒದಗಿಸಿರುವ ₹ 250 ಕೋಟಿ ಅನುದಾನವನ್ನು ವಾಪಸ್‌ ಪಡೆದು, ಅನ್ಯ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

ಎಸ್‌.ಸಿ ಮತ್ತು ಎಸ್‌ಟಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳ ವಿಶೇಷ ವಸತಿ ಯೋಜನೆಗೆ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಬಿಡುಗಡೆ ಮಾಡಿದ್ದ ₹ 250 ಕೋಟಿ ಅನುದಾನವನ್ನು ಹಿಂಪಡೆದು, ನಿಗಮದಲ್ಲಿ ಪ್ರಗತಿಯಲ್ಲಿರುವ ವಸತಿ ಯೋಜನೆಗಳಿಗೆ ಮರು ಹಂಚಿಕೆ ಮಾಡುವಂತೆ ಹಣಕಾಸು ಇಲಾಖೆ ಸೂಚನೆ ನೀಡಿತ್ತು. ಇದರಿಂದ ಈ ಸಮುದಾಯಗಳ 14,000 ಕುಟುಂಬಗಳ ಸ್ವಂತ ಸೂರಿನ ಸೌಲಭ್ಯದಿಂದ ವಂಚಿತರಾಗುವ ಕುರಿತು ‘ಪ್ರಜಾವಾಣಿ’ಯ ಜನವರಿ 27ರ ಸಂಚಿಕೆಯಲ್ಲಿ ‘ಅಲೆಮಾರಿಗಳ ಸ್ವಂತ ಸೂರಿನ ಕನಸು ಭಗ್ನ!‘ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.

ಅಲೆಮಾರಿಗಳು ಮತ್ತು ಅರೆ ಅಲೆಮಾರಿಗಳ ವಿಶೇಷ ವಸತಿ ಯೋಜನೆಗೆ ನೀಡಿದ್ದ ಅನುದಾನವನ್ನು ಹಿಂ‍ಡೆಯುವ ಸರ್ಕಾರದ ನಿರ್ಧಾರವನ್ನು ಎಸ್‌.ಸಿ, ಎಸ್‌.ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ವಿರೋಧಿಸಿತ್ತು. ಸಂಘಟನೆಯ ಸದಸ್ಯರ ಉಪಸ್ಥಿತಿಯಲ್ಲಿ ಸಮಾಜ ಕಲ್ಯಾಣ, ವಸತಿ ಮತ್ತು ಹಣಕಾಸು ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಕೋಟ ಶ್ರೀನಿವಾಸ ಪೂಜಾರಿ, ಯೋಜನೆಯ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ADVERTISEMENT

ಕ್ರಿಮಿನಲ್‌ ಪ್ರಕರಣದ ಎಚ್ಚರಿಕೆ:

‘ಎಸ್‌.ಸಿ ಹಾಗೂ ಎಸ್.ಟಿಗೆ ಸೇರಿದ ಅಲೆಮಾರಿಗಳು, ಅರೆ ಅಲೆಮಾರಿಗಳು ಮತ್ತು ಅತಿಸಣ್ಣ ಸಮುದಾಯಗಳ ವಿಶೇಷ ವಸತಿ ಯೋಜನೆಯ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಿದರೆ ಕ್ರಿಮಿನಲ್‌ ಪ್ರಕರಣ ದಾಖಲು ಮಾಡುವುದಾಗಿ ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದಷ್ಟು ಬೇಗ ವಸತಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ. ಅನುದಾನವನ್ನು ನಿಗದಿತ ಉದ್ದೇಶಕ್ಕೆ ಮಾತ್ರ ಬಳಸುವುದಾಗಿ ಭರವಸೆಯನ್ನೂ ನೀಡಿದ್ದಾರೆ’ ಎಂದು ಎಸ್‌.ಸಿ ಮತ್ತು ಎಸ್‌.ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ಪ್ರಧಾನ ಕಾರ್ಯದರ್ಶಿ ಕಿರಣ್‌ ಕುಮಾರ್‌ ಕೊತ್ತಗೆರೆ ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಾಸಭಾ ಅಧ್ಯಕ್ಷ ವೆಂಕಟರಮಣಯ್ಯ, ಕಾರ್ಯಾಧ್ಯಕ್ಷ ಆದರ್ಶ್‌ ಯಲ್ಲಪ್ಪ, ಉಪಾಧ್ಯಕ್ಷರಾದ ಆನಂದ್‌ ಕುಮಾರ್‌ ಏಕಲವ್ಯ, ಲೋಹಿತಾಶ್ವ, ಜಂಟಿ ಕಾರ್ಯದರ್ಶಿ ಮಂಜುನಾಥ್‌ ಬಿ.ಎಚ್‌., ಖಜಾಂಚಿ ಸಿದ್ದಪ್ಪಾಜಿ ಕೊಳ್ಳೇಗಾಲ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.