ADVERTISEMENT

ಮಥುರಾ, ಕಾಶಿ ದೇಗುಲ ಮಸೀದಿ ಮುಕ್ತಗೊಳಿಸುವುದೇ ನಿಜವಾದ ಸ್ವಾತಂತ್ರ್ಯ: ಈಶ್ವರಪ್ಪ

ಇಡೀ ಜೀವನ ಜೈಲಿನಲ್ಲಿದ್ದರೂ ಹೇಳಿಕೆ ಹಿಂಪಡೆಯಲಾರೆ ಎಂದ ಸಚಿವ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 7:53 IST
Last Updated 11 ಆಗಸ್ಟ್ 2020, 7:53 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಶಿವಮೊಗ್ಗ: ಇಡೀ ಜೀವನ ಜೈಲಿನಲ್ಲಿ ಕಳೆದರೂ ಮಥುರಾ, ಕಾಶಿ ದೇಗುಲಗಳನ್ನು ಮಸೀದಿಗಳಿಂದ ಮುಕ್ತಗೊಳಿಸಬೇಕು ಎಂಬ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಮಥುರಾ ಕೃಷ್ಣನ ಜನ್ಮ ಸ್ಥಳ, ಕಾಶಿ ವಿಶ್ವನಾಥನ ಪುಣ್ಯ ಸ್ಥಳ. ಅಂತಹ ದೇಗುಲಗಳನ್ನು ಕೆಡವಿ ಮಸೀದಿ ಕಟ್ಟಲಾಗಿದೆ. ಅವು ಭಾರತದ ಕೋಟ್ಯಂತರ ಹಿಂದೂಗಳ ಪೂಜ್ಯ ಕೇಂದ್ರಗಳು. ಅಲ್ಲಿ ಭೇಟಿ ನೀಡಿದವರಿಗೆ ಮಸೀದಿಗಳ ಕಾರಣದಿಂದ ಗುಲಾಮತನದ ಅನುಭವವಾಗುತ್ತದೆ. ಇಂತಹ ಕಹಿ ಭಾವನೆಗಳನ್ನು ಹೋಗಲಾಡಿಸಲು ದೇಗುಲಗಳ ಸ್ವಾತಂತ್ರ್ಯ ಅನಿವಾರ್ಯ ಎಂದು ಮಂಗಳವಾರ ಪತ್ರಿಕಾಗೊಷ್ಠಿಯಲ್ಲಿ ಪ್ರತಿಪಾದಿಸಿದರು.

ದೇಶದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲು ಸಾವಿರಾರು ಪ್ರಮುಖ ಮಸೀದಿಗಳಿವೆ. ಅವುಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಯಾವುದೇ ಅಭ್ಯಂತರವಿಲ್ಲ. ಅಡ್ಡಿ ಪಡಿಸುವುದೂ ಇಲ್ಲ. ಮಥುರಾ, ಕಾಶಿ ದೇಗುಲಗಳನ್ನು ಕೆಡವಿ ಅಲ್ಲಿ ಮಸೀದಿ ಕಟ್ಟಲಾಗಿದೆ. ಹಿಂದೂಗಳ ಭಾವನೆಗಳಿಗೂ ಅವರು ಗೌರವ ನೀಡಬೇಕು. ಈಗಾಗಲೇ ಅಯ್ಯೋಧ್ಯೆಯ ರಾಮಚಂದ್ರನ ದೇಗುಲ ಅಂತಹ ಮನಸ್ಸುಗಳ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಿದೆ. ಈ ಎರಡು ಕೇಂದ್ರಗಳಲ್ಲೂ ಅಂತಹ ಭಾವನೆ ಎಲ್ಲರೂ ತಾಳಬೇಕು ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದಿರೋದು ರಸ್ತೆ, ಕಟ್ಟಡ, ಸೇತುವೆ ಕಟ್ಟಲಷ್ಟೇ ಅಲ್ಲ. ಶ್ರದ್ಧಾ ಕೇಂದ್ರಗಳಿಗೆ ಮುಕ್ತಿ ದೊರೆತರೆ ಅದೇ ನಿಜವಾದ ಸ್ವಾತಂತ್ರ್ಯ, ಅಂತಹ ಸ್ವಾತಂತ್ರ್ಯದಿಂದಲೇ ಸಾರ್ಥಕ. ಇದು ಬಿಜೆಪಿ ಅಭಿಪ್ರಾಯ ಅಲ್ಲ. ಕಾಂಗ್ರೆಸ್, ಜೆಡಿಎಸ್‌ನಂತಹ ಹಲವು ಪಕ್ಷಗಳಲ್ಲಿ ಇರುವ ಕೋಟ್ಯಂತರ ರಾಷ್ಟ್ರಭಕ್ತ ಹಿಂದೂಗಳ ಅಭಿಪ್ರಾಯವೂ ಆಗಿದೆ. ಭಾರತೀಯ ಸಂಸ್ಕೃತಿಗಾಗಿ ಹಿಂದೆಯೂ ಸಾಕಷ್ಟು ಬಲಿದಾನಗಳು ನಡೆದಿವೆ. ಆರ್‌ಎಸ್‌ಎಸ್ ಅಂತಹ ಭಾವನೆಗಳನ್ನು ಸದಾ ಗೌರವಿಸುತ್ತದೆ ಎಂದು ವಿವರ ನೀಡಿದರು.

ಓವೈಸಿ ಸಿದ್ದಾಂತವೇ ಬಿಜೆಪಿ, ಆರ್‌ಎಸ್‌ಎಸ್ ವಿರೋಧಿಸುವುದು. ಕೆಪಿಸಿಸಿ ಅಧ್ಯಕ್ಷರು ಮುಸ್ಲಿಂಮರ ಓಲೈಕೆಗೆ ತಮ್ಮ ಹೇಳಿಕೆ ವಿರೋಧಿಸುತ್ತಿದ್ದಾರೆ. ರಾಜಕೀಯಕ್ಕೆ ಇಂತಹ ಹೇಳಿಕೆ ನೀಡಿದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ. ತಮ್ಮನ್ನು ಬಂಧಿಸುವ, ಸಚಿವ ಸ್ಥಾನದಿಂದ ವಜಾಗೊಳಿಸುವ ಅವರ ಹೇಳಿಕೆಯ ಆಶಯ ಎಂದಿಗೂ ಈಡೇರುವುದಿಲ್ಲ ಎಂದು ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.