ಚಿಕ್ಕಮಗಳೂರು: ಬೆಳಗಾವಿ ಅಧಿವೇಶನದಲ್ಲಿ ಸಿ.ಟಿ ರವಿ ಜೊತೆ ನಡೆದ ಜಟಾಪಟಿ ನಂತರ ಶನಿವಾರ ಮೊದಲ ಬಾರಿ ನಗರಕ್ಕೆ ಭೇಟಿ ನೀಡಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಬಾಗಿನ ನೀಡಲು ಮುಂದಾದರು.
ಈ ವಿಷಯ ತಿಳಿದ ಸಚಿವೆ ಕಾರು ನಿಲ್ಲಿಸದೆ ತೆರಳಿ ಬಾಗಿನ ನಿರಾಕರಿಸಿದರು. ಗ್ಯಾರಂಟಿ ಸಮಾವೇಶ ಮತ್ತು ಲಿಂಗಾಯತ ಸಮಾಜ ಆಯೋಜಿಸಿದ್ದ ರೇಣುಕಾಚಾರ್ಯ ಜಯಂತಿಯಲ್ಲಿ ಭಾಗವಹಿಸಲು ಶನಿವಾರ ನಗರಕ್ಕೆ ಲಕ್ಷ್ಮಿ ಹೆಬ್ಬಾಳಕರ ಭೇಟಿ ನೀಡಿದ್ದರು.
ಬಿಜೆಪಿ ಕಾರ್ಯಕರ್ತೆಯರು ಅರಿಸಿನ-ಕುಂಕುಮ, ಹೂ, ಕಾಯಿ, ಎಲೆ, ಅಕ್ಕಿ-ಬೆಲ್ಲ, ಬಾಳೆಹಣ್ಣು, ಲಕ್ಷ್ಮಿ ವಿಗ್ರಹ ಹಿಡಿದು ಪ್ರವಾಸಿ ಮಂದಿರದ ಗೇಟ್ ಬಳಿ ಮೂರು ತಾಸಿಗೂ ಹೆಚ್ಚು ಕಾದಿದ್ದರು. ಅದೇ ಮಾರ್ಗದಲ್ಲಿ ಸಾಗಿದ ಸಚಿವೆ ಕಾರಿನಿಂದ ಇಳಿಯದೆ ಹೋದರು.
ಅಸಮಾಧಾನಗೊಂಡ ಕಾರ್ಯಕರ್ತೆಯರು 'ನಮ್ಮೂರಿಗೆ ಬಂದ ಹೆಣ್ಣು ಮಗಳಿಗೆ ಹಿಂದೂ ಸಂಪ್ರದಾಯದಂತೆ ಅರಿಸಿನ-ಕುಂಕುಮ ನೀಡಲು ಹೋಗಿದ್ದೆವು. ಬಾಗಿನ ಬಿಟ್ಟು ಹೋಗಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ' ಎಂದರು.
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೆ ಕುಂಕುಮ ಕಂಡರೆ ಇವರಿಗೂ ಭಯ ಇರಬಹುದು. ಅವರ ಮನೆಗೆ ಹೆಣ್ಣು ಮಕ್ಕಳು ಹೋದರೆ ಅವರಿಗೆ ಅರಿಶಿನ- ಕುಂಕುಮ ಕೊಡುವುದಿಲ್ಲ ಎನ್ನಿಸುತ್ತದೆ' ಎಂದು ನಗರಸಭೆ ಸದಸ್ಯೆ ಕವಿತಾ ಶೇಖರ್ ಹೇಳಿದರು.
ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಬೋಳರಾಮೇಶ್ವರ ದೇಗುಲದಿಂದ ಎಐಟಿ ವೃತ್ತದವರೆಗೆ ಬೈಕ್ ಜಾಥಾ ನಡೆಸಿದರು.
ಈ ವೇಳೆ ಮಾತನಾಡಿದ ಸಚಿವೆ, ‘ಬೆಳಗಾವಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಖಂಡನೀಯ. ಇದು ಅಕ್ಷಮ್ಯ ತಪ್ಪು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಸಂತ್ರಸ್ತೆಯ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ' ಎಂದರು.
ಸದನದಲ್ಲಿ ಮರ್ಯಾದೆ ಕಳೆದು ಮಾಡಬಾರದ ಅವಮಾನ ಮಾಡಿದ್ದಾರೆ. ಈಗ ಸೋಗಿನ ಬಾಗಿನದ ಅವಶ್ಯಕತೆ ನನಗೆ ಇಲ್ಲಲಕ್ಷ್ಮಿ ಹೆಬ್ಬಾಳಕರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.