ADVERTISEMENT

ಭಾಷೆ ಹೇರಿಕೆ; ಚರ್ಚೆ ಅಗತ್ಯ: ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 14:36 IST
Last Updated 3 ಜೂನ್ 2019, 14:36 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ವಿಜಯಪುರ: ‘ಯಾವುದೇ ಭಾಷೆಯನ್ನು ಹೇರುವ ಮೊದಲು ಸ್ಥಳೀಯವಾಗಿ ಚರ್ಚೆ ಮಾಡಬೇಕು’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಬೇಕು. ಹಾಗಾಗಿ ಹಿಂದಿ ಹೇರಿಕೆ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಸಿ, ಅಭಿಪ್ರಾಯಗಳನ್ನು ಕ್ರೋಡೀಕರಿಸಿ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಸಚಿವ ಸಂಪುಟ ವಿಸ್ತರಣೆ ವಿಚಾರವನ್ನು ಹೈಕಮಾಂಡ್ ನಿರ್ಧರಿಸಲಿದೆ. ಮೈತ್ರಿಯಿಂದ ಕಾಂಗ್ರೆಸ್‌ಗೆ ಸೋಲು ಎಂಬುದನ್ನು ವೈಯಕ್ತಿಕವಾಗಿ ಒಪ್ಪುವುದಿಲ್ಲ. ರಾಜಸ್ಥಾನ, ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ಸೋತಿದೆ. ಆದರೆ, ಅಲ್ಲಿ ಜೆಡಿಎಸ್ ಜತೆ ಮೈತ್ರಿ ಇರಲಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಲಿಂಗಾಯತರ ಕಡೆಗಣನೆ: ‘ರಾಜ್ಯದಿಂದ 10 ಜನ ಲಿಂಗಾಯತ ಸಂಸದರು ಆಯ್ಕೆಯಾಗಿದ್ದಾರೆ. ಪ್ರಹ್ಲಾದ್ ಜೋಶಿ ಮತ್ತು ಸುರೇಶ ಅಂಗಡಿ ಅವರಿಗೆ ಕ್ರಮವಾಗಿ ಕ್ಯಾಬಿನೆಟ್ ಮತ್ತು ರಾಜ್ಯ ಖಾತೆ ನೀಡಿದ್ದಾರೆ. ಇದಕ್ಕೆ ಯಾವ ಮಾನದಂಡ ಅನುಸರಿಸಿದ್ದಾರೆ. ಇದು ಬಿಜೆಪಿಯ ಮನಸ್ಥಿತಿಯನ್ನು ತೋರಿಸುತ್ತದೆ. ಇದಕ್ಕೆ ಬಿಜೆಪಿ ನಾಯಕರು ಉತ್ತರ ನೀಡಬೇಕು ಮತ್ತು ಲಿಂಗಾಯತರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಮಾರ್ಮಿಕವಾಗಿ ಹೇಳಿದರು.

‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತ’ ಎಂಬ ಸುರೇಶ ಅಂಗಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಪ್ರಹ್ಲಾದ್ ಜೋಶಿ ಹಾಗೂ ತಮಗೆ ನೀಡಿರುವ ಸಚಿವ ಸ್ಥಾನದ ಬಗ್ಗೆ ಸುರೇಶ ಅಂಗಡಿ ಚಿಂತಿಸಲಿ. ಅಂಗಡಿ ಅವರ ಸ್ಥಾನದಲ್ಲಿ ನಾನಿದ್ದರೆ ಸಚಿವ ಸ್ಥಾನ ನಿರಾಕರಿಸುತ್ತಿದ್ದೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.