ADVERTISEMENT

ಬೆಳಗಾವಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 10:47 IST
Last Updated 29 ಜೂನ್ 2020, 10:47 IST
ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಪ್ರಗತಿ ಪರಿಶೀಲನಾ ಸಭೆ
ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಪ್ರಗತಿ ಪರಿಶೀಲನಾ ಸಭೆ   

ಬೆಳಗಾವಿ: ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಟುತ್ತಿರುವುದು ಹಾಗೂ ವರದಿಗೂ– ವಾಸ್ತವಕ್ಕೂ ಬಹಳಷ್ಟು ವ್ಯತ್ಯಾಸ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜನಪ್ರತಿನಿಧಿಗಳು ಇಲ್ಲಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ನಗರಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಡೆದಿರುವ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು ಎಂದು ತಾಕೀತು ಮಾಡಿದರು. ಎಲ್ಲ ಪ್ರಾಧಿಕಾರದವರೂ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

‘ನೀವು ತೋರಿಸುವ ಚಿತ್ರಗಳನ್ನು ಗಮನಿಸಿದರೆ ಚೆನ್ನಾಗಿದೆ ಎನಿಸುತ್ತದೆ. ಆದರೆ, ಇದಕ್ಕೆ ವಿರುದ್ಧವಾದ ಅಭಿಪ್ರಾಯಗಳು ಜನಪ್ರತಿನಿಧಿಗಳಿಂದ ಬಂದಿವೆ. ಎಲ್ಲ ಕಥೆಯೂ ಗೊತ್ತಾಯಿತು. ಹೀಗಾಗಿ, ಕಾಮಗಾರಿಗಳನ್ನು ಖುದ್ದಾಗಿ ಪರಿಶೀಲನೆ ನಡೆಸುತ್ತೇನೆ. ನಗರಪಾಲಿಕೆ ಸೇರಿದಂತೆ ಎಲ್ಲ ಪ್ರಾಧಿಕಾರಗಳ ಕಾರ್ಯವೈಖರಿ ಬಗ್ಗೆಯೂ ಸಮಾಧಾನವಾಗಿಲ್ಲ’ ಎಂದು ಹೇಳಿದರು.

ADVERTISEMENT

ಭಯಂಕರ ಡೇಂಜರ್ ಇದ್ದಾರೆ:

‘ಕೆಳಗಿನ ಅಧಿಕಾರಿಗಳು ಭಯಂಕರ ಡೇಂಜರ್ ಇದ್ದಾರೆ. ಗುತ್ತಿಗೆದಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ನೋಟಿಸ್ ಕೊಟ್ಟಿರುವುದಿಲ್ಲ. ಅಂಥವರನ್ನು ಅಮಾನತು ಮಾಡಬೇಕು’ ಎಂದು ಸೂಚಿಸಿದರು.

‘ಅಭಿವೃದ್ಧಿ ಕಾಮಗಾರಿಗಾಗಿ ಅವಶ್ಯವಿದ್ದಲ್ಲಿ ಮರಗಳನ್ನು ಕತ್ತರಿಸಲು ಕೂಡಲೇ ಅನುಮತಿ ಕೊಡಬೇಕು’ ಎಂದು ಅರಣ್ಯ ಇಲಾಖೆ ಅಧಿಕಾರಿಗೆ ತಾಕೀತು ಮಾಡಿದರು.

‘ತ್ಯಾಜ್ಯ ನಿರ್ವಹಣೆಗೆ ಅತ್ಯಾಧುನಿಕ ಯಂತ್ರ ಖರೀದಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ನಗರದಲ್ಲಿಯೇ ಸಭೆ ನಿಗದಿಪಡಿಸಬೇಕು’ ಎಂದು ನಿರ್ದೇಶನ ನೀಡಿದರು.

‘ವಂಟಮೂರಿ ಲೈನ್‌ನಲ್ಲಿ ಗುಂಡಿ ತೆಗೆದು ವರ್ಷವಾದರೂ ಕೆಲಸ ಮುಗಿದಿಲ್ಲ. ಇದರಿಂದ ಅಲ್ಲಿನ ಮನೆಗಳವರಿಗೆ ತುಂಬಾ ತೊಂದರೆಯಾಗುತ್ತಿದೆ. ಮಹಿಳೆಯರು ಹಾಗೂ ಮಕ್ಕಳು ನನ್ನ ಎದುರು ಅಳಲು ತೋಡಿಕೊಂಡಿದ್ದಾರೆ. ನಿಮ್ಮ ಮನೆ ಮುಂದೆ ಹೀಗಿದ್ದರೆ ಏನು ಮಾಡುತ್ತಿದ್ದಿರಿ. ಕೂಡಲೇ ಸಮಸ್ಯೆ ನಿವಾರಿಸಬೇಕು’ ಎಂದು ತಾಕೀತು ಮಾಡಿದರು.

ವಡಗಾವಿಯಲ್ಲಿ ಆಸ್ಪತ್ರೆ:

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ, ‘ಯೋಜನೆಯ ಪ್ರಗತಿಯಲ್ಲಿ ದೇಶದ 100 ನಗರಗಳಲ್ಲಿ 24ನೇ ರ‍್ಯಾಂಕ್‌ ಪಡೆದಿದ್ದೇವೆ. ನಗರ ಸಾರಿಗೆ ಬಸ್ ನಿಲ್ದಾಣ ಪ್ರಗತಿಯಲ್ಲಿದೆ. ನಗರ ಹಾಗೂ ಕೇಂದ್ರ ಬಸ್ ನಿಲ್ದಾಣ ಸಂಪರ್ಕಿಸಲು ಸಬ್ ವೇ ನಿರ್ಮಿಸಲಾಗುವುದು. ಕೋವಿಡ್‌ನಿಂದ ಪ್ರಗತಿಗೆ ತೊಡಕಾಗಿದೆ. ವಡಗಾವಿಯಲ್ಲಿ 10 ಹಾಸಿಗೆಗಳ ಆಸ್ಪತ್ರೆಯನ್ನು ₹ 2.25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ’ ಎಂದು ವಿವರಿಸಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ‘ಬುಡಾದಿಂದ ದೊಡ್ಡ ನಿವೇಶನಗಳ ಬದಲಿಗೆ 30x40 ನಿವೇಶನ ಅಭಿವೃದ್ಧಿಪಡಿಸಿ ಹೆಚ್ಚಿನ ಮಂದಿಗೆ ಅನುಕೂಲ ಮಾಡಿಕೊಡಬೇಕು. ಎಲ್ಲರಿಗೂ ಸೂರು ಸಿಗಬೇಕು ಎನ್ನುವ ಪ್ರಧಾನಿ ಕನಸು ನನಸಾಗಿಸಲು ಶ್ರಮಿಸಬೇಕು’ ಎಂದು ಸೂಚಿಸಿದರು.

ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.