ADVERTISEMENT

ಅಕ್ಕಿ, ಗೋಧಿ ನಿಲ್ಲಿಸಿದ ಪ್ರಸಂಗ: ಸಿದ್ದಗಂಗಾ ಮಠಕ್ಕೆ ದೌಡಾಯಿಸಿದ ಸಚಿವೆ

ಸಿದ್ಧಗಂಗಾ ಮಠದ ಅನ್ನ ದಾಸೋಹಕ್ಕೆ ಅಕ್ಕಿ, ಗೋಧಿ ಸ್ಥಗಿತ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 15:30 IST
Last Updated 5 ಫೆಬ್ರುವರಿ 2020, 15:30 IST
ಸಚಿವೆ ಶಶಿಕಲಾ ಜೊಲ್ಲೆ
ಸಚಿವೆ ಶಶಿಕಲಾ ಜೊಲ್ಲೆ    

ತುಮಕೂರು: ಅನ್ನ ದಾಸೋಹ ಯೋಜನೆಯಡಿ ಸಿದ್ಧಗಂಗಾ ಮಠ ಸೇರಿದಂತೆ ಹಲವು ಸಂಘ ಸಂಸ್ಥೆಗಳಿಗೆ ಉಚಿತವಾಗಿ ನೀಡುತ್ತಿದ್ದ ಅಕ್ಕಿ, ಗೋಧಿ ವಿತರಣೆ ಸ್ಥಗಿತಗೊಳಿಸಿ ಸುದ್ದಿಯಾಗಿದ್ದಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶಶಿಕಲಾ ಜೊಲ್ಲೆ ಬುಧವಾರ ಮಠಕ್ಕೆ ಧಾವಿಸಿ ಬಂದರು.

ನಾಡಿನಲ್ಲಿ ಅಸಂಖ್ಯಾತ ಭಕ್ತರನ್ನು ಹೊಂದಿರುವ ಮಠಕ್ಕೆ ಅಕ್ಕಿ ಮತ್ತು ಗೋಧಿ ನೀಡುವುದನ್ನು ಸ್ಥಗಿತಗೊಳಿಸಿದ್ದು ಆಕ್ರೋಶಕ್ಕೂ ಕಾರಣವಾಗಿತ್ತು. ಈ ವಿಚಾರವನ್ನು ತಿಳಿಗೊಳಿಸಲು ಸಚಿವೆ ಭೇಟಿ ನೀಡಿದ್ದರು. ಸಿದ್ದಲಿಂಗ ಸ್ವಾಮೀಜಿ ಅವರ ಜತೆ ಮಾತುಕತೆ ನಡೆಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವೆ, ‘ಕೇಂದ್ರ ಸರ್ಕಾರ ಸಬ್ಸಿಡಿ ದರದಲ್ಲಿ ಅಕ್ಕಿ ಮತ್ತು ಗೋಧಿ ನೀಡುವುದನ್ನು ನಿಲ್ಲಿಸಿತು. ಹೀಗಾಗಿ ಮಠಕ್ಕೆ ನೀಡುವುದರಲ್ಲಿ ವ್ಯತ್ಯಯವಾಗಿದೆ. ನವೆಂಬರ್‌ನಲ್ಲಿಯೇ ಈ ಸಂಬಂಧ ಸ್ವಾಮೀಜಿ ಹಾಗೂ ಸಂಘ ಸಂಸ್ಥೆಗಳವರು ನನಗೆ ಪತ್ರ ಬರೆದಿದ್ದರು. ಮುಖ್ಯ ಕಾರ್ಯದರ್ಶಿ ಅವರ ಜತೆ ಈ ಸಂಬಂಧ ಮಾತುಕತೆ ನಡೆಸಿ ಕ್ರಮವಹಿಸಲು ಮುಂದಾಗಿದ್ದೆ. ಅಷ್ಟರಲ್ಲಿ ಸಹೋದರ ಯು.ಟಿ.ಖಾದರ್ ಈ ಬಗ್ಗೆ ಮಾತನಾಡಿದರು’ ಎಂದು ತಿಳಿಸಿದರು.

ADVERTISEMENT

‘ಈ ವಿಚಾರದಲ್ಲಿ ಮುಖ್ಯಮಂತ್ರಿ ಅವರು ನನ್ನ ಮೇಲೆ ಗರಂ ಆಗಿಲ್ಲ. ಮಾಹಿತಿ ಕೇಳಿದರು. ವಿವರಿಸಿದೆ. ಸಿದ್ದಗಂಗಾ ಮಠವೂ ಸೇರಿದಂತೆ 355 ಶಾಲೆಗಳಿಗೆ ಅಕ್ಕಿ ಮತ್ತು ಗೋಧಿಯನ್ನು ಈ ಹಿಂದಿನಂತೆಯೇ ನೀಡಲಾಗುವುದು. ಇದಕ್ಕೆ ಮಾಸಿಕ ₹ 18 ಕೋಟಿ ವೆಚ್ಚವಾಗುತ್ತದೆ’ ಎಂದರು.

ಹೆಸರು ಬದಲಾವಣೆ: ಅಂಗನವಾಡಿ ಕಾರ್ಯಕರ್ತೆಯರು ಅಪಾರವಾದ ಕೆಲಸ ಮಾಡುವರು. ಅವರನ್ನು ಅಂಗನವಾಡಿ ಕಾರ್ಯಕರ್ತೆ ಎನ್ನುವುದು ಸರಿ ಎನಿಸುವುದಿಲ್ಲ. ಅವರ ಹೆಸರಿಗೆ ಗೌರವ ಬರಬೇಕು. ಈ ದೃಷ್ಟಿಯಿಂದ ಒಳ್ಳೆಯ ಹೆಸರು ಕೊಡಬೇಕು ಎನ್ನುವ ಆಸೆ ಇದೆ. ಈ ವಿಚಾರದಲ್ಲಿ ಚಿಂತನೆ ನಡೆಯುತ್ತಿದೆ ಎಂದು ಜೊಲ್ಲೆ ಹೇಳಿದರು.

ತಪ್ಪಿಸುವುದಿಲ್ಲ ಎನ್ನುವ ನಂಬಿಕೆ ಇತ್ತು

‘ಮಠ ಇಷ್ಟೊಂದು ಕೆಲಸ ಮಾಡಬೇಕಾದರೆ. ಮಠಕ್ಕೆ ಅಕ್ಕಿ, ಗೋಧಿ ಕೊಡುವುದಿಲ್ಲ ಎನ್ನಲು ಹೇಗೆ ಸಾಧ್ಯ ಎಂದು ಸ್ವಾಮೀಜಿ ಅವರ ಜತೆ ಮಾತುಕತೆ ನಡೆಸುವಾಗ ಶಶಿಕಲಾ ಜೊಲ್ಲೆ ಹೇಳಿದರು. ಆಗ ಸರ್ಕಾರ ತಪ್ಪಿಸುವುದಿಲ್ಲ ಎನ್ನುವ ನನ್ನ ನಂಬಿಕೆ ಇತ್ತು’ ಎಂದು ಸಿದ್ದಲಿಂಗ ಸ್ವಾಮೀಜಿ ನುಡಿದರು. ನಾನು ಈ ಹಿಂದಿ ನಾಲ್ಕೈದು ಬಾರಿ ಮಠಕ್ಕೆ ಬಂದು ಹೋಗಿದ್ದೆ ಎಂದು ಶಶಿಕಲಾ ಜೊಲ್ಲೆ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.