ADVERTISEMENT

ಸಿದ್ದರಾಮಯ್ಯ ಪುತ್ರ ಕಡಲೆಪುರಿ ತಿನ್ನುತ್ತಿದ್ದರಾ: ಸಚಿವ ಸೋಮಶೇಖರ್ ಪ್ರಶ್ನೆ

ಮುಖ್ಯಮಂತ್ರಿ ಬಿಎಸ್ ವೈ ಪುತ್ರ ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಎಂದು ಯತೀಂದ್ರ ಆರೋಪ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 7:17 IST
Last Updated 4 ಜೂನ್ 2020, 7:17 IST
ಡಿಸೆಂಬರ್‌ನಲ್ಲಿ ನಡೆಯಬೇಕಿರುವ ಪಂಚಲಿಂಗ ದರ್ಶನ ಉತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ತಲಕಾಡಿನಲ್ಲಿ ದೇಗುಲಗಳ ವೀಕ್ಷಣೆ... ವೈದ್ಯನಾಥೇಶ್ವರ, ಮರಳೇಶ್ವರ, ಪಾತಾಳೇಶ್ವರ, ಮುಡುಕುತೊರೆ ಯಲ್ಲಿ ಮಲ್ಲಿಕಾರ್ಜುನೇಶ್ವರ, ಅರ್ಕೇಶ್ವರ ದರ್ಶನ
ಡಿಸೆಂಬರ್‌ನಲ್ಲಿ ನಡೆಯಬೇಕಿರುವ ಪಂಚಲಿಂಗ ದರ್ಶನ ಉತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ತಲಕಾಡಿನಲ್ಲಿ ದೇಗುಲಗಳ ವೀಕ್ಷಣೆ... ವೈದ್ಯನಾಥೇಶ್ವರ, ಮರಳೇಶ್ವರ, ಪಾತಾಳೇಶ್ವರ, ಮುಡುಕುತೊರೆ ಯಲ್ಲಿ ಮಲ್ಲಿಕಾರ್ಜುನೇಶ್ವರ, ಅರ್ಕೇಶ್ವರ ದರ್ಶನ   

ಮೈಸೂರು: ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಪುತ್ರ ಏನು ಕಡಲೇಪುರಿ ತಿನ್ನುತ್ತಿದ್ದರಾ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದರು.

ಯಾವ ವಿಷಯದಲ್ಲೂ ಹಸ್ತಕ್ಷೇಪ ನಡೆಸದ ಬಿ.ವೈ.ವಿಜಯೇಂದ್ರ ವಿರುದ್ಧ ಸಿದ್ದರಾಮಯ್ಯ ಈಗ ರಾಜಕೀಯ ಕಾರಣಕ್ಕೆ ಹೇಳಿಕೆ ನೀಡುತ್ತಿದ್ದಾರೆ. ಅವರು ಹೇಳಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಇಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಶಿವಮೊಗ್ಗ ಡಿಸಿಸಿ ಬ್ಯಾಂಕ್ ವಿಚಾರಣೆಯಲ್ಲೂ ವಿಜಯೇಂದ್ರ ಮಧ್ಯ ಪ್ರವೇಶಿಸಿಲ್ಲ. ವರ್ಗಾವಣೆಗೂ ಅವರಿಗೂ ಸಂಬಂಧವೇ ಇಲ್ಲ. 2 ದಿನಗಳಿಗೊಮ್ಮೆ ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತಿದ್ದೇನೆ. ಒಮ್ಮೆಯೂ ಅವರು ತಮ್ಮ ಪುತ್ರನನ್ನು ಭೇಟಿ ಮಾಡಿ ಎಂದು ಹೇಳಿಲ್ಲ. ಯಾವತ್ತೂ ವಿಜಯೇಂದ್ರ ‘ಸೂಪರ್ ಸಿಎಂ’ ತರಹ ವರ್ತಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.‌

ADVERTISEMENT

ಮುಖ್ಯಮಂತ್ರಿ ಹುದ್ದೆ ಈಗಂತೂ ಖಾಲಿ ಇಲ್ಲ. ಈಗ ಇರುವ ಮುಖ್ಯಮಂತ್ರಿ ಪಾದರಸದಂತೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಮರೆಯಬಾರದು ಎಂದು ಚಾಟಿ ಬೀಸಿದರು. ಎಂ.ಟಿ.ನಾಗರಾಜ್ ಅವರಿಗೆ ಬಿಜೆಪಿಯಲ್ಲಿ ಯಾರೂ ಅಡ್ಡಗಾಲು ಹಾಕಿಲ್ಲ. ಈ ರೀತಿ ಹೇಳಿಯೇ ಅವರು ಸೋತಿದ್ದು ಎಂದು ಚಾಟಿ ಬೀಸಿದರು.

ಅಡಗೂರು ಎಚ್.ವಿಶ್ವನಾಥ್ ಒಬ್ಬರೇ ಅಲ್ಲ. ಎಂ.ಟಿ.ಬಿ ನಾಗರಾಜ್, ಶಂಕರ್, ರೋಷನ್‌ಬೇಗ್ ಸೇರಿದಂತೆ ಹಲವರು ವಿಧಾನಪರಿಷತ್ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದಾರೆ. ಇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ ಎಂಬುದು ನಮ್ಮ ಒತ್ತಾಯವೂ ಆಗಿದೆ. ಬಿ.ಎಸ್.ಯಡಿಯೂರಪ್ಪ ಮಾತಿಗೆ ತಪ್ಪುವುದಿಲ್ಲ. ಆದರೆ, ಅವರಿಗೂ ಹೈಕಮಾಂಡ್ ಇದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಮೈಸೂರು ಜಿಲ್ಲೆಯಲ್ಲಿ ಹಲವು ಮಂದಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಇದು ಲಾಭಿ ಎನಿಸುವುದಿಲ್ಲ ಎಂದು ಹೇಳಿದರು. ನಿರಾಣಿ ಅವರನ್ನು ರಾಮದಾಸ್ ಭೇಟಿ ಮಾಡಿದ ಹಳೆಯ ವಿಡಿಯೊ ಹಾಕಿ ತೋರಿಸುವುದರ ಹಿಂದೆ ಮಾಧ್ಯಮದವರ ಉದ್ದೇಶವಾದರೂ ಏನು ಎಂದು ಅವರು ಇದೇ ವೇಳೆ ಸುದ್ದಿಗಾರರನ್ನು ಪ್ರಶ್ನಿಸಿದರು.

ಮೈಸೂರು ಮೃಗಾಲಯವನ್ನು ಜೂನ್ 8ರಿಂದ ತೆರೆಯಲು ಅನುಮತಿ ನೀಡುವಂತೆ ಮುಖ್ಯಮಂತ್ರಿ ಅವರನ್ನು ಕೇಳಲಾಗಿದೆ. ಈ ಕುರಿತ ಒಪ್ಪಿಗೆಯು ಅಧಿಕೃತವಾಗಿ ಒಂದೆರಡು ದಿನಗಳಲ್ಲಿ ಬರಲಿದೆ ಎಂದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ 10 ಮಂದಿ ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಈ ವರ್ಷದಿಂದ ಆರಂಭವಾಗಲಿದೆ. ಒಂದೆರಡು ವಾರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಾಗಲಿ, ಭಿನ್ನಮತವಾಗಲಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.