ADVERTISEMENT

‘ಎಸ್ಸೆಸ್ಸೆಲ್ಸಿ, 12ನೇ ತರಗತಿ ಆರಂಭ: ಶೀಘ್ರ ತೀರ್ಮಾನ’

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 20:20 IST
Last Updated 14 ಡಿಸೆಂಬರ್ 2020, 20:20 IST
ಎಸ್. ಸುರೇಶ್ ಕುಮಾರ್
ಎಸ್. ಸುರೇಶ್ ಕುಮಾರ್   

ಬೆಂಗಳೂರು: ‘ಶಾಲೆಗಳನ್ನು ತೆರೆಯುವ ಕುರಿತಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಶೀಘ್ರದಲ್ಲಿ ಚರ್ಚೆ ನಡೆಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ವಿವಿಧ ಖಾಸಗಿ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳ ಜೊತೆ ಶಾಲಾ ಮಂಡಳಿಗಳು, ಮಕ್ಕಳ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೋಮವಾರ ಚರ್ಚಿಸಿದ ಅವರು, ‘ಕೋವಿಡ್ ನಿಯಮಗಳನ್ನು ಪಾಲಿಸಿ ಎಸ್ಸೆಸ್ಸೆಲ್ಸಿ ಮತ್ತು 12ನೇ ತರಗತಿ ಆರಂಭಿಸುವ ಬಗ್ಗೆ ಮುಖ್ಯಮಂತ್ರಿ ಜೊತೆ ಶೀಘ್ರದಲ್ಲೇ ವಿವಿಧ ಇಲಾಖೆಗಳ ಸಭೆ ನಡೆಸಿ, ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

‘ಮಕ್ಕಳ ಮರು ದಾಖಲಾತಿಗೆ ಎರಡು ಬಾರಿ ಸಮಯ ವಿಸ್ತರಿಸಲಾಗಿತ್ತು. ಆದರೂ ಕೆಲವು ಪೋಷಕರು ತಮ್ಮ ಮಕ್ಕಳನ್ನು ಮುಂದಿನ ತರಗತಿಗಳಿಗೆ ಇನ್ನೂ ಮರು ದಾಖಲಾತಿ ಮಾಡಿಲ್ಲ. ಮರು ದಾಖಲಾತಿ ಮಾಡದಿರುವುದಕ್ಕೆ ಕೋವಿಡ್ ನೆಪ ಆಗಬಾರದು’ ಎಂದು ಹೇಳಿದರು.

ADVERTISEMENT

‘ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆಯ ಆಶಯದಂತೆ ಮಕ್ಕಳನ್ನು ಮುಂದಿನ ತರಗತಿಗಳಿಗೆ ಮರು ದಾಖಲಾತಿ ಮಾಡುವುದು ಪೋಷಕರ ಕರ್ತವ್ಯ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ದಾಖಲು ಮಾಡಲು ಮುಂದಾಗಬೇಕು’ ಎಂದು ಸಲಹೆ ನೀಡಿದ್ದಾರೆ.

‘ಕೋವಿಡ್ ಕಾರಣ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡದಿರುವ, ಸಾಧ್ಯವಾದಷ್ಟು ಶುಲ್ಕ ಇಳಿಸುವಂಥ ಮತ್ತು ಶುಲ್ಕ ಪಾವತಿಸಲು ಕಂತು ನೀಡಲು ಮುಂದಾಗಬೇಕು. ಶಾಲಾ ಶುಲ್ಕ ನಿಗದಿ ವಿಚಾರದಲ್ಲಿ ಪೋಷಕರೊಂದಿಗೆ ಚರ್ಚಿಸಿ ಶಾಲಾ ಸಂಘಟನೆಗಳು ಶೀರ್ಘ ನಿರ್ಧಾರಕ್ಕೆ ಬಂದರೆ, ಸರ್ಕಾರ ಈ ಬಗ್ಗೆ ತೀರ್ಮಾನಿಸಲು ಅನುಕೂಲವಾಗಲಿದೆ’ ಎಂದರು.

‘ಶಾಲಾಡಳಿತ ಮಂಡಳಿಗಳು ಶಿಕ್ಷಣ ಕಾಯ್ದೆಯಡಿ ತಮ್ಮ ಶಾಲೆಗಳಲ್ಲಿ ಪೋಷಕರ ಪ್ರತಿನಿಧಿಗಳನ್ನೊಳಗೊಂಡ ಶಾಲಾ ಸಲಹಾ ಸಮಿತಿಗಳನ್ನು ರಚಿಸಿಕೊಂಡು ಸೌಹಾರ್ದದ ವಾತಾವರಣದಲ್ಲಿ ಚರ್ಚಿಸಿ, ಪರಸ್ಪರ ಹೊಂದಾಣಿಕೆ ಸೂತ್ರದೊಂದಿಗೆ ಬಂದಲ್ಲಿ ಸರ್ಕಾರ ಒಂದು ನಿರ್ಧಾರಕ್ಕೆ ಬರಲು ಸುಲಭವಾಗುತ್ತದೆ’ ಎಂದೂ ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.