ADVERTISEMENT

ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಸ್ಪಂದನೆ

ಎನ್.ನವೀನ್ ಕುಮಾರ್
Published 4 ಮೇ 2019, 20:15 IST
Last Updated 4 ಮೇ 2019, 20:15 IST
ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನ
ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನ   

ಮೈಸೂರು: ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್‌) ಅಧೀನದಲ್ಲಿರುವ ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ’ಕ್ಕೆ ಸ್ವಾಯತ್ತತೆ ನೀಡುವ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್‌ಆರ್‌ಡಿ) ಸಕಾರಾತ್ಮಕವಾಗಿ ಸ್ಪಂದಿಸಿದೆ.

ಈವರೆಗೆ ಕೈಗೊಂಡಿರುವ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡುವಂತೆ ಸಚಿವಾಲಯವು ಸಿಐಐಎಲ್‌ಗೆ ಪತ್ರ ಬರೆದಿದೆ. ಈ ವಿಚಾರದ ಬಗ್ಗೆ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ಕೆ.ಆರ್‌.ದುರ್ಗಾದಾಸ್‌ ಅವರು ಫೆಲೋಗಳ ಸಭೆ ನಡೆಸಿ, ಈವರೆಗೆ ನಡೆದಿರುವ ಯೋಜನೆಗಳ ಪ್ರಗತಿ ಹಾಗೂ ಚಟುವಟಿಕೆಗಳ ಬಗ್ಗೆ ಅವಲೋಕನ ಮಾಡಿದ್ದಾರೆ. ಅದರ ವರದಿಯನ್ನೂ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ.

‘ಎಚ್ಆರ್‌ಡಿ ಅಧೀನ ಕಾರ್ಯದರ್ಶಿ ಇತ್ತೀಚೆಗೆ ಸಿಐಐಎಲ್‌ಗೆ ಬಂದಿದ್ದರು. ನಮ್ಮ ಕೇಂದ್ರದ ಬಗ್ಗೆ ಚರ್ಚಿಸಿದ್ದಲ್ಲದೆ, ಇಲ್ಲಿನ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವಂತೆ ಸಲಹೆ ನೀಡಿದ್ದರು. ಕೇಂದ್ರದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ. ಮಾಹಿತಿ ಪರಿಶೀಲಿಸಿ ಸ್ವಾಯತ್ತತೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ’ ಎಂದು ಡಾ.ಕೆ.ಆರ್‌.ದುರ್ಗಾದಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪ್ರಗತಿಯಲ್ಲಿರುವ ಯೋಜನೆಗಳು: ವಡ್ಡಾರಾಧನೆ, ಕವಿರಾಜಮಾರ್ಗದ ಸಂಶೋಧನಾ ಲೇಖನಗಳ ಸಂಪಾದನೆ, ಶಾಸನ ಸಂಶೋಧನೆ– ಸಂಪಾದನೆ, ಕಿಟೆಲ್‌ ಕನ್ನಡ– ಕನ್ನಡ– ಇಂಗ್ಲಿಷ್‌ ನಿಘಂಟು ಅಂತರ್ಜಾಲ ಸೇರ್ಪಡೆ, ಕವಿಚರಿತೆ– ಅಂತರ್ಜಾಲ ಸೇರ್ಪಡೆ, ವಿರಾಚೋಲಿಯಂ ತಮಿಳು ಕೃತಿಯ ಕನ್ನಡ ಅನುವಾದ, ಛಂದೋಂಬುದಿ ಕೃತಿಯ ಇಂಗ್ಲಿಷ್‌ ಅನುವಾದ, ಕವಿ ಜನಾಶ್ರಯಮು ತೆಲುಗು ಕೃತಿಯ ಕನ್ನಡ ಅನುವಾದ ಯೋಜನೆಗಳು ಪ್ರಗತಿಯಲ್ಲಿವೆ.

ಜನ್ನನ ಯಶೋಧರ ಚರಿತೆ, ರನ್ನನ ಗದಾಯುದ್ಧ, ಮಲೆಯ ಮಾದೇಶ್ವರ ಕಾವ್ಯದ ಸಾಂಸ್ಕೃತಿಕ ಪದಕೋಶ, ಸಾಹಿತ್ಯ ಚರಿತ್ರೆಗಳ ಮೂಲಕ ಪ್ರಾಚೀನ ಕನ್ನಡ ಸಾಹಿತ್ಯದ ಓದು, ವಡ್ಡಾರಾಧನೆಯ ತೆಲುಗು ಅನುವಾದ, ಕೇಶಿರಾಜನ ಶಬ್ದಮಣಿ ದರ್ಪಣದ ಕನ್ನಡ ಅಸಾಧಾರಣ ಲಕ್ಷಣಗಳು, ಶಿವಶರಣೆಯರ ವಚನಗಳಲ್ಲಿ ನಿಸರ್ಗ ರೂಪಕಗಳು, ವಚನ ಸಾಹಿತ್ಯತತ್ವ, ಬಸವಯುಗದಲ್ಲಿ ಬೌದ್ಧತತ್ವ, ವಚನ ಸಾಹಿತ್ಯಾಧ್ಯಯನ ಸಮೀಕ್ಷೆ ಎಂಬ ನಿಯಮಿತ ಯೋಜನೆಗಳು ಪ್ರಗತಿಯ‌ಲ್ಲಿವೆ.

ಇದಲ್ಲದೆ, ಹಿರಿಯ ಸಂಶೋಧಕರಾದ ಜಿ.ವೆಂಕಟಸುಬ್ಬಯ್ಯ, ಎಂ.ಚಿದಾನಂದಮೂರ್ತಿ, ಷ.ಷಟ್ಟರ್‌, ಟಿ.ವಿ.ವೆಂಕಟಾಚಲ ಶಾಸ್ತ್ರಿ, ಗುರುಲಿಂಗ ಕಾಪಸೆ ಅವರ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಲು ಉದ್ದೇಶಿಸಿದೆ.

‘ಎರಡೂವರೆ ಎಕರೆ ಜಾಗ ಬೇಕು’
‘ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿದ, ಪ್ರೀಮಿಯಂ ಸ್ಟುಡಿಯೊ ಎದುರಿಗೆ ಇರುವ ಎರಡೂವರೆ ಎಕರೆ ಜಾಗವನ್ನು ನೀಡುವಂತೆ ವಿಶ್ವವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಮತ್ತೊಮ್ಮೆ ನಿಯೋಗದಲ್ಲಿ ತೆರಳಿ ಮನವಿ ಮಾಡಲಾಗುವುದು’ ಎಂದು ದುರ್ಗಾದಾಸ್‌ ತಿಳಿಸಿದರು.

ಅಧ್ಯಯನ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ. ಫೆಲೊಗಳು ಕುಳಿತುಕೊಳ್ಳಲು ಸರಿಯಾದ ಸ್ಥಳಾವಕಾಶವಿಲ್ಲ. ಅಧ್ಯಯನ ಹಾಗೂ ಸಂಶೋಧನೆ ನಡೆಸಲು ಸಮಸ್ಯೆ ಆಗುತ್ತಿದೆ. ಅಲ್ಲದೆ, ಇಲ್ಲಿ ಅತ್ಯುತ್ತಮ ಗ್ರಂಥಾಲಯ ನಿರ್ಮಿಸುವ ಉದ್ದೇಶವಿದೆ.ಇ–ಗ್ರಂಥಾಲಯ ಸೌಲಭ್ಯ ಕಲ್ಪಿಸಲೂ ನಿರ್ಧರಿಸಲಾಗಿದೆ ಎಂದರು.

*
ಫೆಲೊ, ಬೋಧಕೇತರ ಸಿಬ್ಬಂದಿ ವೇತನ ಸೇರಿ ವಾರ್ಷಿಕ ₹1 ಕೋಟಿ ಅನುದಾನ ಬರುತ್ತಿದೆ. ಇದು ಸಾಲದು. ₹2.15 ಕೋಟಿ ನೀಡುವಂತೆ ಎಚ್‌ಆರ್‌ಡಿಗೆ ಮನವಿ ಮಾಡಿದ್ದೇವೆ.
–ಡಾ.ಕೆ.ಆರ್‌.ದುರ್ಗಾದಾಸ್‌, ಯೋಜನಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.