ADVERTISEMENT

ಅಧಿವೇಶನ ವೆಚ್ಚದಲ್ಲಿ ಅಕ್ರಮ

ಲೆಕ್ಕ ಪರಿಶೋಧನೆ ಇಲಾಖೆ ವಿಚಾರಣೆಯಿಂದ ಬಹಿರಂಗ

ಹೊನಕೆರೆ ನಂಜುಂಡೇಗೌಡ
Published 21 ಡಿಸೆಂಬರ್ 2018, 19:16 IST
Last Updated 21 ಡಿಸೆಂಬರ್ 2018, 19:16 IST
   

ಬೆಂಗಳೂರು: ಬೆಳಗಾವಿಯಲ್ಲಿ 2016 ಹಾಗೂ 17ನೇ ಸಾಲಿನಲ್ಲಿ ನಡೆದ ವಿಧಾನಮಂಡಲ ಚಳಿಗಾಲ ಅಧಿವೇಶನದ ವೇಳೆ ಮಾಡಲಾದ ಖರ್ಚುವೆಚ್ಚಗಳು ಸಂಶಯಾಸ್ಪದವಾಗಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ₹ 10ರಿಂದ 12ಕೋಟಿ ಅನಗತ್ಯ ಹೊರೆಯಾಗಿದೆ ಎಂದಿರುವ ಹಣಕಾಸು ಇಲಾಖೆ, ಈ ಬಗ್ಗೆ ಉನ್ನತ ಮಟ್ಟದ ವಿಚಾರಣೆ ನಡೆಸುವಂತೆ ಶಿಫಾರಸು ಮಾಡಿದೆ.

ಈ ಅವಧಿಯ ಅಧಿವೇಶನಗಳ ಖರ್ಚುವೆಚ್ಚಗಳನ್ನು ಪರಿಶೀಲಿಸಿರುವ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಹೆಚ್ಚುವರಿ ನಿರ್ದೇಶಕ ಎನ್‌.ಬಿ. ಶಿವರುದ್ರಪ್ಪ ನೇತೃತ್ವದ ಐವರು ಅಧಿಕಾರಿಗಳ ತಂಡ ಅಧಿವೇಶನದ ವೇಳೆ ಮಾಡಲಾದ ಊಟೋಪಚಾರ, ಪೆಂಡಾಲ್‌ ನಿರ್ಮಾಣ, ಸುವರ್ಣಸೌಧದ ಸುಣ್ಣ– ಬಣ್ಣ, ಕಿಟಕಿ– ಬಾಗಿಲುಗಳಿಗೆ ಮೆಲಾಮೈನ್‌ ಪಾಲೀಶ್‌, ಕೆಮಿಕಲ್‌ ಶೌಚಾಲಯ ಹಾಗೂ ಸೊಳ್ಳೆ ಪರದೆಗಳಿಗೆ ಪಾವತಿಸಿರುವ ಬಿಲ್‌ಗಳು ಸಂದೇಹಕ್ಕೆ ಕಾರಣವಾಗಿದೆ ಎಂದೂ ಹೇಳಿದೆ.

ಲೆಕ್ಕಪರಿಶೋಧನೆ ತಂಡ ಸಲ್ಲಿಸಿರುವ 40 ಪುಟಗಳ ವರದಿಯನ್ನು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ ಅವರು ವಿಧಾನಸಭೆ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಅವರಿಗೆ ಸಲ್ಲಿಸಿದ್ದಾರೆ. ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಕೆಲವೊಂದು ಸೇವೆಗಳಿಗೆ ಎರಡೆರಡು ಸಲ ಬಿಲ್‌ ಪಾವತಿ ಮಾಡಲಾಗಿದೆ ಎಂದೂ ಪ್ರಸ್ತಾಪಿಸಲಾಗಿದೆ.

ADVERTISEMENT

2016ರ ನವೆಂಬರ್‌ 21ರಿಂದ ಡಿಸೆಂಬರ್‌ 3ರವರೆಗೆ ನಡೆದ ಚಳಿಗಾಲದ ಅಧಿವೇಶನಕ್ಕೆ ಸರ್ಕಾರ ಬಜೆಟ್‌ನಲ್ಲಿ ₹ 20.55ಕೋಟಿ ಅನುದಾನ ಒದಗಿಸಿತ್ತು. 2017ರ ನವೆಂಬರ್‌ 13ರಿಂದ 24ರವರೆಗೆ ಸೇರಿದ್ದ ಅಧಿವೇಶನಕ್ಕೆ ₹ 29.39 ಕೋಟಿ ಅನುದಾನ ನೀಡಿತ್ತು. ಎರಡೂ ಅಧಿವೇಶನಗಳಿಗೆ ಹಣಕಾಸು ಇಲಾಖೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಅಧಿನಿಯಮ 1999ರ ಕಲಂ 4 (ಜಿ) ಅಡಿ ಕ್ರಮವಾಗಿ ₹ 20 ಕೋಟಿಹಾಗೂ ₹ 21.57 ಕೋಟಿಗೆ ವಿನಾಯ್ತಿ ನೀಡಿತ್ತು. ಈ ಮೊತ್ತಕ್ಕಿಂತ ₹ 8.60 ಕೋಟಿ ಹೆಚ್ಚುವರಿಯಾಗಿ ಖರ್ಚು ಮಾಡಲಾಗಿದೆ ಎಂದು ವರದಿ ಆಕ್ಷೇಪಿಸಿದೆ.

2017ರ ಅನುದಾನದಲ್ಲಿ ಅದರಹಿಂದಿನ ವರ್ಷದ (2016) ಬಾಕಿ ಬಿಲ್‌ಗಳನ್ನು ಪಾವತಿಸಲು ₹ 3.68 ಕೋಟಿ ಬಳಸಿರುವುದು ಬಜೆಟ್‌ ಕೈಪಿಡಿಯ ಸೂಚನೆಗಳಿಗೆ ವಿರುದ್ಧವಾಗಿದೆ. ಯಾವುದೇ ನೀತಿ– ನಿಯಮ ಪಾಲಿಸದೆ ಕೊಟೇಷನ್‌ಗಳನ್ನು ಕರೆಯಲಾಗಿದೆ. ಗುತ್ತಿಗೆದಾರರು, ತೆರಿಗೆ, ಜಿಎಸ್‌ಟಿ ಹಾಗೂ ಸೇವಾ ತೆರಿಗೆಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಸಂದಾಯ ಮಾಡದಿರುವ ಕುರಿತು ಸಮಗ್ರಪರಿಶೀಲನೆ ನಡೆಸುವಂತೆಯೂ ತಿಳಿಸಿದೆ.

ಕೆಲವು ಏಜೆನ್ಸಿಗಳು ಕಂಪ್ಯೂಟರ್‌ ಜನರೇಟೆಡ್‌ ಲೆಟರ್‌ಹೆಡ್‌ನಲ್ಲಿ ಕೊಟೇಷನ್‌ ನೀಡಿದ್ದಾರೆ. ಎಸ್‌.ಆರ್‌ ಮಾರುಕಟ್ಟೆ ದರವನ್ನು ಯಾವ ದರದ ಜೊತೆ ಹೋಲಿಕೆ ಮಾಡಲಾಗಿದೆ ಎಂಬ ವಿವರಗಳಿರುವುದಿಲ್ಲ. ಕೆಲವು ಕೊಟೇಷನ್‌ ದರಗಳು ಅಸಹಜ ರೀತಿಯಲ್ಲಿ ಹೆಚ್ಚಳವಾಗಿರುವುದು ಕಂಡು ಬರುತ್ತದೆ. ಲೀಟರ್‌ ಫಿನಾಯಿಲ್‌ ₹ 500, ಪೆಂಡಾಲ್‌ ಚದರಡಿಗೆ ದಿನಕ್ಕೆ ₹ 15 ಮತ್ತು ಸೊಳ್ಳೆ ಪರದೆ ಬಾಡಿಗೆಗೆ ಪಡೆದಿರುವುದನ್ನು ಉದಾಹರಿಸಲಾಗಿದೆ.

ಪಾವತಿ ಎಲ್ಲೆಲ್ಲಿ ಅನುಮಾನ?

ಪೆಂಡಾಲ್‌– 9.32 ಕೋಟಿ

ಸುವರ್ಣವಿಧಾನಸೌಧ ಸುಣ್ಣಬಣ್ಣ– ₹ 2.48 ಕೋಟಿ

ಮೆಲಾಮೈನ್ ಪಾಲೀಶ್‌– ₹ 1.21 ಕೋಟಿ

ಸೊಳ್ಳೆ ಪರದೆ ಬಾಡಿಗೆ– ₹ 1.84 ಕೋಟಿ

ಕೆಮಿಕಲ್‌ ಶೌಚಾಲಯ– ₹ 2.42 ಕೋಟಿ

ಗಣ್ಯರು ಹಾಗೂ ಊಟದ ಬಿಲ್‌– 45.48 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.