ADVERTISEMENT

ಮೈಸೂರು ಶಾಸಕ ತನ್ವೀರ್‌ ಸೇಠ್‌ ಆರೋಗ್ಯ ಸ್ಥಿತಿ ಸ್ಥಿರ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 4:11 IST
Last Updated 18 ನವೆಂಬರ್ 2019, 4:11 IST
ತನ್ವೀರ್ ಸೇಠ್
ತನ್ವೀರ್ ಸೇಠ್   

ಮೈಸೂರು: ಶಾಸಕ ತನ್ವೀರ್ ಸೇಠ್ ಅವರ ಮೇಲೆ ಭಾನುವಾರ ರಾತ್ರಿ ಯುವಕನೊಬ್ಬ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ. ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ್ದಾಗ ತನ್ವೀರ್ ಸೇಠ್ ಮೇಲೆ ಈ ರೀತಿ ಹಲ್ಲೆ ನಡೆದಿದೆ. ತಕ್ಷಣವೇ ಅವರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಸರ್ಜರಿ ನಡೆದಿದೆ.

ಬನ್ನಿಮಂಟಪದ ಬಾಲಭವನದಲ್ಲಿ ನಡೆದ ವಿವಾಹ ಸಮಾರಂಭದ ವೇಳೆ ಸೇಠ್ ಬಳಿ ಬಂದ ಫರ್ಹಾನ್ ಪಾಷಾ ಎಂಬ ವ್ಯಕ್ತಿ ಕತ್ತಿಯಿಂದ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಂತೆ ಸೇಠ್ ಬೆಂಬಲಿಗರು ಆತನನ್ನು ಹಿಡಿದು ಥಳಿಸಿ ಆಮೇಲೆ ಪೊಲೀಸರಿಗೊಪ್ಪಿಸಿದ್ದಾರೆ. ಸೇಠ್‌ ಮೇಲೆ ಹಲ್ಲೆ ನಡೆಸಿ ತಪ್ಪಿಸಲು ಯತ್ನಿಸುತ್ತಿರುವ ದೃಶ್ಯವನ್ನು ಮದುವೆ ಮನೆಯ ವಿಡಿಯೊಗ್ರಾಫರ್ ಸೆರೆ ಹಿಡಿದಿದ್ದಾರೆ.

ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಸೇಠ್ ಅವರಿಗೆ ಚಿಕಿತ್ಸೆ ನೀಡಿದ್ದು, ಆಸ್ಪತ್ರೆಯವರು ಮಾಧ್ಯಮದವರೊಂದಿಗೆ ಯಾವುದೇ ಅಧಿಕೃತ ಸಂವಹನ ನಡೆದಿಲ್ಲ. ಆದರೆ ಸೇಠ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹಲ್ಲೆ ನಡೆಸಿರುವ ಪಾಷಾ, ಉದಯಗಿರಿ ನಿವಾಸಿಯಾಗಿದ್ದು ಕರಕೌಶಲ ಕಾರ್ಮಿಕನಾಗಿದ್ದಾನೆ. ಹಲ್ಲೆಗೆ ಕಾರಣ ಏನೆಂಬುದರ ಬಗ್ಗೆ ನಾವು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಹೇಳಿದ್ದಾರೆ. ಆದಾಗ್ಯೂ, ಪಾಷಾ ಹಲವಾರು ಬಾರಿ ಸೇಠ್‌ ಅವರಲ್ಲಿ ಕೆಲಸ ಕೊಡಿಸುವಂತೆ ಬೇಡಿದ್ದನು. ಅದು ವಿಳಂಬವಾದ ಹತಾಶೆಯಿಂದ ಆತ ಹಲ್ಲೆ ನಡೆಸಿದ್ದಾನೆ ಎಂದು ಬಲ್ಲಮೂಲಗಳು ಹೇಳಿವೆ.

ನರಸಿಂಹರಾಜ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ಐಪಿಸಿ 307 ಸೆಕ್ಷನ್ ಅಡಿಯಲ್ಲಿ ಕೇಸು ದಾಖಲಿದ್ದು, ಹತ್ಯೆಗೆ ಯತ್ನ ನಡೆಸಿದ ಆರೋಪ ಹೊರಿಸಿದ್ದಾರೆ.

ಆಸ್ಪತ್ರೆಯ ಹೊರಗೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.