ADVERTISEMENT

ಎಸಿಬಿ ವಿಚಾರಣೆ ಎದುರಿಸಿದ ಜಮೀರ್‌ ಅಹಮ್ಮದ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 21:15 IST
Last Updated 6 ಆಗಸ್ಟ್ 2022, 21:15 IST
ಜಮೀರ್‌ ಅಹಮ್ಮದ್ ಖಾನ್‌
ಜಮೀರ್‌ ಅಹಮ್ಮದ್ ಖಾನ್‌   

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ಶಾಸಕ ಬಿ.ಜೆಡ್‌. ಜಮೀರ್‌ ಅಹಮ್ಮದ್‌ ಖಾನ್‌, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಎದುರು ಶನಿವಾರ ವಿಚಾರಣೆಗೆ ಹಾಜರಾಗಿದ್ದರು.

₹ 87.34 ಕೋಟಿ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಜಮೀರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದ ಎಸಿಬಿ, ಜುಲೈ 5ರಂದು ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಿತ್ತು. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ತನಿಖಾ ತಂಡವು ಶಾಸಕರಿಗೆ ಜುಲೈ 16ರಂದು ನೋಟಿಸ್‌ ಜಾರಿಮಾಡಿತ್ತು.

ನಗರದ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಖನಿಜ ಭವನದಲ್ಲಿನ ಎಸಿಬಿ ಕೇಂದ್ರ ಕಚೇರಿಗೆ ಶನಿವಾರ ಬೆಳಿಗ್ಗೆ ಹಾಜರಾದ ಜಮೀರ್‌, ಕೆಲವು ಗಂಟೆಗಳ ಕಾಲ ತನಿಖಾ ತಂಡದ ಪ್ರಶ್ನೆಗಳಿಗೆ ಉತ್ತರ ನೀಡಿದರು. ನಗರದ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಸಮೀಪದಲ್ಲಿ ಶಾಸಕರು ನಿರ್ಮಿಸಿರುವ ಬೃಹತ್‌ ಬಂಗಲೆಗೆ ಸಂಬಂಧಿಸಿದಂತೆಯೇ ತನಿಖಾ ತಂಡ ಹಲವು ಪ್ರಶ್ನೆಗಳನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಜಾರಿ ನಿರ್ದೇಶನಾಲಯವು ನೀಡಿರುವ ವರದಿ ಆಧಾರದಲ್ಲಿ ಎಸಿಬಿ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸುತ್ತಿದೆ. ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಕೆಲವು ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವಂತೆ ತನಿಖಾ ತಂಡ ಸೂಚಿಸಿದೆ.

ಎಸಿಬಿ ಅಧಿಕಾರಿಗಳ ವಿಚಾರಣೆ ಎದುರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜಮೀರ್‌ ಅಹಮ್ಮದ್, ‘ನನ್ನ ವಿರುದ್ಧ ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ಈ ರಾಜ್ಯದಲ್ಲಿ ನಾನು ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇಬ್ಬರೇ ಇವರೆಲ್ಲರ ಕಣ್ಣಿಗೆ ಕಾಣುತ್ತಿದ್ದೇವೆ’ ಎಂದರು.

‘ತನಿಖಾ ತಂಡ ಕೇಳಿರುವ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವೆ. ಅವರು ಕೇಳಿರುವ ದಾಖಲೆಗಳನ್ನು ಒದಗಿಸಲು ಸ್ವಲ್ಪ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.