ADVERTISEMENT

ಅಪಘಾತ ಪರಿಹಾರ: ನೀತಿ ರೂಪಿಸಲು ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 19:30 IST
Last Updated 23 ಮಾರ್ಚ್ 2022, 19:30 IST
ವಿಧಾನಸಭೆ ಕಲಾಪ (ಸಂಗ್ರಹ ಚಿತ್ರ)
ವಿಧಾನಸಭೆ ಕಲಾಪ (ಸಂಗ್ರಹ ಚಿತ್ರ)   

ಬೆಂಗಳೂರು: ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ನೀಡುವ ವಿಚಾರದಲ್ಲಿ ಸ್ಪಷ್ಟವಾದ ನೀತಿಯೊಂದನ್ನು ರೂಪಿಸಬೇಕು ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ವಿಧಾನಸಭೆಯಲ್ಲಿ ಬುಧವಾರ ಒತ್ತಾಯಿಸಿದರು.

ತಮ್ಮ ಕ್ಷೇತ್ರದ ವ್ಯಾಪ್ತಿಯ ನಡಗುಂದಿಯ ಐವರು ಹೊಸಪೇಟೆ– ಚಿತ್ರದುರ್ಗ ನಡುವೆ ಹೆದ್ದಾರಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಕುರಿತು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಶಿವಾನಂದ ಪಾಟೀಲ, ‘ಪಾವಗಡ ಸಮೀಪದ ಪಳವಳ್ಳಿಕಟ್ಟೆಯಲ್ಲಿ ಬಸ್‌ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದಿಂದ ತಲಾ ₹ 5 ಲಕ್ಷ ಪರಿಹಾರ ನೀಡಲಾಗಿದೆ. ಅದಕ್ಕಿಂತ ಮೊದಲು ನಿಡಗುಂದಿಯ ಐವರು ಮೃತಪಟ್ಟಿದ್ದರು. ಅವರ ಕುಟುಂಬಗಳಿಗೂ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್‌ ಅಪಘಾತದಲ್ಲಿ ಮೃತಪಟ್ಟ ಐವರ ಕುಟುಂಬಗಳಿಗೂ ಪರಿಹಾರ ನೀಡುವಂತೆ ಜೆಡಿಎಸ್‌ನ ಕೆ.ಎಸ್‌. ಲಿಂಗೇಶ್‌ ಆಗ್ರಹಿಸಿದರು.

ADVERTISEMENT

‘ಅಪಘಾತ ಪ್ರಕರಣಗಳಲ್ಲಿ ವಿಮೆಯ ಹಣದಲ್ಲಿ ಪರಿಹಾರ ನೀಡಲಾಗುತ್ತದೆ. ವಿಮಾ ಕಂಪನಿಗಳ ಜತೆ ಚರ್ಚಿಸಿ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಉತ್ತರಿಸಿದರು.

‘ರಸ್ತೆ ಸುರಕ್ಷತಾ ನಿಧಿಯಲ್ಲಿ ₹ 470 ಕೋಟಿ ಬಳಕೆಯಾಗದೇ ಉಳಿದಿದೆ. ಅದನ್ನು ಪರಿಹಾರ ನೀಡಲು ಬಳಸಿಕೊಳ್ಳಿ. ಕಾರ್ಮಿಕರು, ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಾಗ ಮಾನವೀಯತೆ ಆಧಾರದಲ್ಲಿ ಪರಿಹಾರ ಕೊಡಬೇಕು’ ಎಂದು ಶಿವಾನಂದ ಪಾಟೀಲ ಆಗ್ರಹಿಸಿದರು.

‘ರಸ್ತೆ ಅಪಘಾತ ಪ್ರಕರಣಗಳಲ್ಲಿ ಪರಿಹಾರ ನೀಡುವ ಸಂಬಂಧ ಒಂದು ನೀತಿ ರೂಪಿಸುವುದು ಉತ್ತಮ’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದರು. ‘ಎಲ್ಲ ಸಾವಿನ ಪ್ರಕರಣಗಳಿಗೂ ಸರ್ಕಾರ ಪರಿಹಾರ ಕೊಡಲು ಸಾಧ್ಯವೇ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಶಿವಾನಂದ ಪಾಟೀಲ ಮತ್ತು ಕಾನೂನು ಸಚಿವರ ನಡುವೆ ಬಿರುಸಿನ ವಾಕ್ಸಮರವೂ ನಡೆಯಿತು.

ಮಾನವೀಯ ದೃಷ್ಟಿಯಿಂದ ಪರಿಹಾರ ನೀಡಲು ನೀತಿ ರೂಪಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸಲಹೆ ನೀಡಿದರು. ಪರಿಶೀಲಿಸಿ ತೀರ್ಮಾನ ಕೈಗೊಳ್ಳುವುದಾಗಿ ಶ್ರೀರಾಮುಲು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.