ADVERTISEMENT

ಸಿಎಂ, ಡಿಸಿಎಂಗೆ ‘ಉಸ್ತುವಾರಿ’ ವರದಿ

ಶಾಸಕರ ಅಸಮಾಧಾನ– 22 ಸಚಿವರ ಜೊತೆ ಸುರ್ಜೇವಾಲಾ ಚರ್ಚೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 16:27 IST
Last Updated 16 ಜುಲೈ 2025, 16:27 IST
   

ಬೆಂಗಳೂರು: ರಾಜ್ಯದಲ್ಲಿ ಮೂರು ದಿನ ಠಿಕಾಣಿ ಹೂಡಿದ್ದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಶಾಸಕರು ವ್ಯಕ್ತಪಡಿಸಿದ್ದ ಅಸಮಾಧಾನ, ದೂರು, ಆರೋಪಗಳನ್ನು 22 ಸಚಿವರ ಮುಂದಿಟ್ಟು ಚರ್ಚೆ ನಡೆಸಿದ್ದಾರೆ. ಶಾಸಕರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಜೊತೆಗೆ, ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಸಚಿವರಿಗೆ ಕಿವಿಮಾತು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಬುಧವಾರ ಸಂಜೆ ಭೇಟಿ ಮಾಡಿದ ಸುರ್ಜೇವಾಲಾ, ಶಾಸಕರು ಮತ್ತು ಸಚಿವರ ಜೊತೆ ನಡೆಸಿದ ಸಭೆಯಲ್ಲಿ ಪ್ರಸ್ತಾಪಗೊಂಡ ವಿಚಾರಗಳು ಮತ್ತು ನಿಗಮ– ಮಂಡಳಿಗಳಿಗೆ ನೇಮಕದ ಬಗ್ಗೆ ಚರ್ಚೆ ನಡೆಸಿದರು.

ಸಚಿವರಾದ ಈಶ್ವರ ಖಂಡ್ರೆ, ಕೃಷ್ಣ ಬೈರೇಗೌಡ, ಎಂ.ಬಿ. ಪಾಟೀಲ, ರಾಮಲಿಂಗಾ ರೆಡ್ಡಿ, ಎನ್‌. ಚಲುವರಾಯಸ್ವಾಮಿ, ಎಚ್.ಕೆ. ಪಾಟೀಲ, ಜಿ. ಪರಮೇಶ್ವರ ಮತ್ತು ಕೆ.ಜೆ. ಜಾರ್ಜ್ ಜೊತೆ ಸುರ್ಜೇವಾಲಾ ಅವರು ಬುಧವಾರ ಸಭೆ ನಡೆಸಿದರು. ಸಚಿವರಾದ ಕೆ.ಎಚ್. ಮುನಿಯಪ್ಪ, ಶರಣಬಸಪ್ಪ‌ ದರ್ಶನಾಪುರ, ಆರ್.ಬಿ. ತಿಮ್ಮಾಪುರ, ಶಿವರಾಜ್ ತಂಗಡಗಿ, ಎಂ.ಸಿ ಸುಧಾಕರ್, ಕೆ.ಎನ್. ರಾಜಣ್ಣ, ಶಿವಾನಂದ‌ ಪಾಟೀಲ ಮತ್ತು ಮಂಕಾಳ ವೈದ್ಯ ಜೊತೆ ಚರ್ಚೆ ನಡೆಸಲು ಬಾಕಿಯಿದೆ.

ADVERTISEMENT

ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಖಂಡ್ರೆ, ‘ರಿಯಲ್ ಎಸ್ಟೇಟ್ ಪಾಲಾಗುತ್ತಿದ್ದ ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಜಮೀನು ಸಂರಕ್ಷಿಸಿ ಲಾಲ್ ಬಾಗ್ ಮಾದರಿಯಲ್ಲಿ ಮತ್ತೊಂದು ಉದ್ಯಾನ ಮಾಡುವ ಉದ್ದೇಶಕ್ಕೆ ಸುರ್ಜೆವಾಲಾ ಮೆಚ್ಚುಗೆ ವ್ಯಕ್ತಪಡಿಸಿದರು. ಈಗಾಗಲೇ 160 ಎಕರೆ ಅರಣ್ಯ ಜಮೀನನ್ನು ಖಾಸಗಿ ರಿಯಲ್ ಎಸ್ಟೇಟ್ ಕಂಪನಿ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಮಾರಾಟ ಮಾಡಿರುವ ಕೇಂದ್ರ ಸರ್ಕಾರದ ಧೋರಣೆ ಬಗ್ಗೆಯೂ ಅವರು ಚರ್ಚಿಸಿದರು’ ಎಂದರು.

‘ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಶಾಸಕರಿಗೆ ಸಹಕಾರ ಕೊಡುತ್ತಿದ್ದೇವೆ. ಹೊಸ ತಾಲ್ಲೂಕುಗಳಿಗೆ ತಾಲ್ಲೂಕು ಆಡಳಿತ ಸೌಧ ಇಲ್ಲ. ಹೊಸತಾಗಿ 64 ತಾಲ್ಲೂಕುಗಳು ರಚನೆ ಆಗಿವೆ. ಬಿಜೆಪಿ‌ ಸರ್ಕಾರ 14 ತಾಲ್ಲೂಕುಗಳಿಗೆ ಪ್ರಜಾಸೌಧ ನಿರ್ಮಾಣಕ್ಕೆ ಮಂಜೂರಾತಿ ನೀಡಿತ್ತು. ಉಳಿದ ತಾಲ್ಲೂಕುಗಳಲ್ಲಿ ಮಂಜೂರಾತಿ ನೀಡಿರಲಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ಪ್ರಜಾಸೌಧ ನಿರ್ಮಾಣಕ್ಕೆ ಒತ್ತು ಕೊಟ್ಟಿದ್ದೇವೆ. ಒಂದು ವರ್ಷದಲ್ಲಿ 49 ಪ್ರಜಾಸೌಧ ಮಂಜೂರು‌ ಮಾಡಿದ್ದೇವೆ’ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಸಚಿವರ ಮೌಲ್ಯಮಾಪನ ಅಲ್ಲ: ‘ನಾನು ಕೈಗಾರಿಕಾ ಸಚಿವನಾದ ಮೇಲೆ ರಾಜ್ಯಕ್ಕೆ ಯಾವೆಲ್ಲ ಕೈಗಾರಿಕೆಗಳು ಬಂದಿವೆ ಎಂಬ ಬಗ್ಗೆ ಸುರ್ಜೇವಾಲಾ ಅವರಿಗೆ ಮಾಹಿತಿ ನೀಡಿದ್ದೇನೆ. ನನ್ನ ಇಲಾಖೆಯ ಕೆಲಸದ ಬಗ್ಗೆ ಅವರು ಖುಷಿಯಾಗಿದ್ದಾರೆ. ಇದು ಸಚಿವರ ಮೌಲ್ಯಮಾಪನ ಅಲ್ಲ. ಮೌಲ್ಯಮಾಪನ ಆಗಿರುತ್ತಿದ್ದರೆ ನಾವು ಬೇರೆ ರೀತಿಯಲ್ಲಿ ತಯಾರಾಗಿ ಬರುತ್ತಿದ್ದೆವು’ ಎಂದು ಎಂ.ಬಿ. ಪಾಟೀಲ ತಿಳಿಸಿದರು. 

‘ಶಾಸಕರ ಬೇಡಿಕೆಗಳ ಬಗ್ಗೆ ಸುರ್ಜೇವಾಲಾ ಪ್ರಸ್ತಾಪಿಸಿದರು. ಬಸ್‌ ನಿಲ್ದಾಣಕ್ಕೆ ಕೆಲವು ಶಾಸಕರು ಬೇಡಿಕೆ ಇಟ್ಟಿದ್ದಾರೆ. ಮುಜರಾಯಿ ಇಲಾಖೆಗೆ ಸಂಬಂಧಿಸಿದಂತೆ ಶಾಸಕರಿಗೆ ಯಾವುದೇ ಅಸಮಾಧಾನ ಇಲ್ಲವೆಂದು ಅವರು ಹೇಳಿದರು. ಬಸ್‌ ನಿಲ್ದಾಣದ ಬಗ್ಗೆ ವಿವರಣೆ ಕೊಟ್ಟಿದ್ದೇನೆ’ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

‘ನನ್ನ ಇಲಾಖೆ ಮೇಲೆ ಶಾಸಕರು ದೂರು ಕೊಟ್ಟಿಲ್ಲ. ಸಚಿವರು ಸಿಗುತ್ತಿಲ್ಲ ಎಂಬ ಶಾಸಕರ ಆರೋಪಗಳ ಬಗ್ಗೆಯೂ ಸುರ್ಜೇವಾಲಾ ನನ್ನ ಮುಂದೆ ಚರ್ಚಿಸಿಲ್ಲ. ಅಭಿವೃದ್ಧಿ ವಿಚಾರದ ಬಗ್ಗೆ ಮಾತ್ರ ಮಾತನಾಡಿದ್ದೇವೆ’ ಎಂದು ಎಚ್‌.ಕೆ. ಪಾಟೀಲ ತಿಳಿಸಿದರು.

‘ನಿಗಮ– ಮಂಡಳಿಗಳಿಗೆ ಶೀಘ್ರ ನೇಮಕ’

‘ನಿಗಮ,‌ ಮಂಡಳಿಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ಸ್ಥಾನ ನೀಡಲು ಪಟ್ಟಿ ಸಿದ್ಧ‍ಪಡಿಸಲು ಹೈಕಮಾಂಡ್‌ ಸೂಚಿಸಿತ್ತು. ನನಗೆ ವಹಿಸಿದ್ದ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು, ಹೈಕಮಾಂಡ್ ನಿರ್ಧರಿಸಲಿದೆ’ ಎಂದು ಸಚಿವ ಜಿ. ಪರಮೇಶ್ವರ ತಿಳಿಸಿದರು.

‘ಕಾರ್ಯಕರ್ತರಿಗೆ ಜವಾಬ್ದಾರಿ ಹಂಚಿಕೆ ಮಾಡಿರುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆ ಮಾಡಿದ್ದೇನೆ. ಆದಷ್ಟು ಬೇಗ ನಿಗಮ, ಮಂಡಳಿಗಳಿಗೆ ನೇಮಕ ನಡೆಯಲಿದೆ’ ಎಂದರು.

ವಿದೇಶದಲ್ಲಿ ಸಚಿವ ರಾಜಣ್ಣ

ಸಚಿವ ಕೆ.ಎನ್‌. ರಾಜಣ್ಣ ಅವರು ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಸುರ್ಜೇವಾಲಾ ಅವರು ಶಾಸಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿರುವುದಕ್ಕೆ ಇತ್ತೀಚೆಗೆ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದ ರಾಜಣ್ಣ, ‘ಉಸ್ತುವಾರಿ ನನ್ನನ್ನು ಕರೆದು ಏನು ಕೇಳುತ್ತಾರೆ’ ಎಂದು ಪ್ರಶ್ನಿಸಿದ್ದರು. ಸುರ್ಜೇವಾಲಾ ಅವರು ಸಚಿವರ ಜೊತೆ ಸಭೆ ನಡೆಸುತ್ತಿರು ವಾಗಲೇ ರಾಜಣ್ಣ ವಿದೇಶಕ್ಕೆ ತೆರಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.