ADVERTISEMENT

ಡಿಕೆಶಿ ಸಂಘಟನಾ ಚತುರ: ಎಚ್‌.ವಿಶ್ವನಾಥ್‌ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 7:47 IST
Last Updated 4 ಜುಲೈ 2021, 7:47 IST
ಎಚ್.ವಿಶ್ವನಾಥ್‌
ಎಚ್.ವಿಶ್ವನಾಥ್‌   

ಮೈಸೂರು: ‘ಡಿ.ಕೆ.ಶಿವಕುಮಾರ್‌ ಒಬ್ಬ ಸಂಘಟನಾ ಚತುರ. ಪಕ್ಷವನ್ನು ಯಾವ ರೀತಿ ಸಂಘಟನೆ ಮಾಡಬೇಕು ಎಂಬುದನ್ನು ಅವರು ಕರಗತಮಾಡಿಕೊಂಡಿದ್ದಾರೆ’ ಎಂದು ವಿಧಾನಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌, ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಡಿ.ಕೆ.ಶಿವಕುಮಾರ್‌ ಅವರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ತ್ಯಜಿಸಿ ಬಿಜೆಪಿ ಸೇರಿರುವ 17 ಶಾಸಕರನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಅವರು ಪಕ್ಷಕ್ಕೆ ಕರೆದ ಕೂಡಲೇ ಯಾರೂ ಹೋಗಲ್ಲ. ಆದರೂ ಅವರ ಸೌಜನ್ಯತೆಯನ್ನು ಮೆಚ್ಚುತ್ತೇನೆ. ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿ ರಾಜಕೀಯ ಚಲನಲವನ, ಪರಿಸ್ಥಿತಿಗಳನ್ನು ಅವರು ಅರ್ಥಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

‘ಬಿಜೆಪಿ ಸೇರಿದ ಕಾಂಗ್ರೆಸ್‌ನ ಶಾಸಕರನ್ನು ಪ್ರಳಯ ಆದರೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ರಾಜಕಾರಣದಲ್ಲಿ ಅಂತಹ ಮಾತು ನಡೆಯದು. ರಾಜಕೀಯ ಪಕ್ಷಗಳ ನಡವಳಿಕೆ ಅಯಾ ಕಾಲಕ್ಕೆ ಬದಲಾವಣೆ ಆಗುತ್ತಿರುತ್ತದೆ ಎಂಬುದನ್ನು ಸಿದ್ದರಾಮಯ್ಯ ಅರ್ಥಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ಸಿದ್ದರಾಮಯ್ಯ ಕಾಂಗ್ರೆಸ್‌ ಬರುವಾಗ ‘ಪ್ರಳಯ ಆದರೂ ಅವರನ್ನು ಸೇರಿಸಲ್ಲ’ ಎಂದು ಯಾರಾದರೂ ಹೇಳಿದ್ದಾರಾ? ನಾನೂ ಒಳಗೊಂಡಂತೆ ಇದೇ ಡಿಕೆಶಿ, ಖರ್ಗೆ, ಪರಮೇಶ್ವರ್‌, ಎಸ್‌.ಎಂ.ಕೃಷ್ಣ ಮುಂತಾದ ದೊಡ್ಡ ನಾಯಕರೇ ನಿಮ್ಮನ್ನು ಸ್ವಾಗತಿಸಿಲ್ಲವೇ? ಸಿದ್ದರಾಮಯ್ಯ ದ್ವೇಷದ ರಾಜಕಾರಣ ಬಿಡಬೇಕು. ಪಕ್ಷ ಬಿಡುವುದು, ಸೇರುವುದು ಹೊಸತಲ್ಲ’ ಎಂದು ನುಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬೇಡ: ‘ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಡೆಸಲೇಬಾರದು’ ಎಂದು ಪುನರುಚ್ಚರಿಸಿದ ವಿಶ್ವನಾಥ್‌, ‘ಪರೀಕ್ಷೆ ನಡೆದು ವಿದ್ಯಾರ್ಥಿಗಳಿಗೆ ಏನಾದರೂ ತೊಂದರೆ ಉಂಟಾದರೆ ಅದಕ್ಕೆ ಶಿಕ್ಷಣ ಸಚಿವರು ಮತ್ತು ಸರ್ಕಾರವೇ ಹೊಣೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.