ADVERTISEMENT

ಸೋಲಿನ ಹತಾಶೆಯಿಂದ ಬಿಜೆಪಿಯಿಂದ ಅವಹೇಳನಕಾರಿ ಹೇಳಿಕೆ: ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 20:15 IST
Last Updated 15 ಏಪ್ರಿಲ್ 2019, 20:15 IST

ಬೆಂಗಳೂರು: ‘ಸೋಲಿನ ಭೀತಿಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಬಿಜೆಪಿ ನಾಯಕರ ಮೇಲೆ ಚುನಾವಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು’ ಎಂದು ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ಪ್ರಕಾಶ್ ರಾಥೋಡ್ ಆಗ್ರಹಿಸಿದರು.

ನಗರದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ನಮ್ಮ ಸಂವಿಧಾನದಲ್ಲಿಯೇ ವಾಕ್‌ ಸ್ವಾತಂತ್ರ್ಯ ಹಕ್ಕು ನೀಡಲಾಗಿದೆ. ಹಾಗೆಂದು, ಬಿಜೆಪಿ ನಾಯಕರು ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಮೋದಿ ವಿರೋಧಿಸುವವರ ಬಗ್ಗೆ ಬಿಜೆಪಿ ಶಾಸಕ ಸಿ.ಟಿ. ರವಿ ಅವರು ಕೀಳು ಪದವನ್ನು ಬಳಸಿದ್ದಾರೆ. ಇದು ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದರು.

‘ಸಿ.ಟಿ. ರವಿ ಮತ್ತು ಚಿತ್ರದುರ್ಗ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರ ವಿರುದ್ದ ತನಿಖೆ ಮಾಡಬೇಕು. ಚಿತ್ರದುರ್ಗದಲ್ಲಿ ನಡೆದ ಸಮಾವೇಶಕ್ಕೆ ಬಂದಾಗ ಮೋದಿ ಅವರು ತಂದಿದ್ದ ಕಪ್ಪು ಪೆಟ್ಟಿಗೆ ಕುರಿತು ತನಿಖೆ ಆಗಬೇಕು’ ಎಂದು ಒತ್ತಾಯಿಸಿದ ಅವರು, ‘ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಅವಹೇಳನಕಾರಿಯಾಗಿ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ’ ಎಂದರು.

ADVERTISEMENT

‘ವೈಯಕ್ತಿಕ ಟೀಕೆ ಕೂಡಾ ನೀತಿಸಂಹಿತೆ ಉಲ್ಲಂಘನೆ. ಇದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು. ಚುನಾವಣಾ ಆಯೋಗ ಕೂಡ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದೂ ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.