ADVERTISEMENT

ಕಟ್ಟಡ ಕಾರ್ಮಿಕರಿಗೆ 100 ಬಸ್‌ಗಳಲ್ಲಿ ಸಂಚಾರಿ ಚಿಕಿತ್ಸಾಲಯ

100 ಬಸ್‌ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸವಲತ್ತು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 15:56 IST
Last Updated 11 ಮಾರ್ಚ್ 2025, 15:56 IST
‘ಸಂಚಾರಿ ಆರೋಗ್ಯ ಘಟಕ’ ವಾಹನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ರಿಜ್ವಾನ್ ಅರ್ಷದ್, ಸಂತೋಷ್ ಎಸ್. ಲಾಡ್‌ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ
‘ಸಂಚಾರಿ ಆರೋಗ್ಯ ಘಟಕ’ ವಾಹನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ರಿಜ್ವಾನ್ ಅರ್ಷದ್, ಸಂತೋಷ್ ಎಸ್. ಲಾಡ್‌ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಾರ್ಮಿಕರು ಸುಭಿಕ್ಷವಾಗಿದ್ದರೆ, ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೀಗಾಗಿಯೇ ಕಾರ್ಮಿಕರ ಆರೋಗ್ಯ ಕಾಪಾಡಲು ಸಂಚಾರಿ ಚಿಕಿತ್ಸಾಲಯಗಳ ಸೇವೆಯನ್ನು ಆರಂಭಿಸುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಾರ್ಮಿಕ ಇಲಾಖೆ ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದಲ್ಲಿ ರೂಪಿಸಲಾಗಿರುವ 100 ಸಂಚಾರಿ ಚಿಕಿತ್ಸಾಲಯ ಬಸ್‌ಗಳಿಗೆ ವಿಧಾನಸೌಧದ ಎದುರು ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಆರ್ಥಿಕತೆಯಲ್ಲಿ ಮಹತ್ವದ ಕೊಂಡಿಗಳಾಗಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಚಿಕಿತ್ಸೆ ಪಡೆದುಕೊಳ್ಳುವುದೇ ದುಸ್ತರವಾಗಿದೆ. ಈ ಸಮಸ್ಯೆಯನ್ನು ಸಂಚಾರಿ ಚಿಕಿತ್ಸಾಲಯಗಳು ನಿವಾರಿಸಲಿವೆ’ ಎಂದರು.

ADVERTISEMENT

‘15 ಲಕ್ಷ ಕಾರ್ಮಿಕರಿಗೆ ಚಿಕಿತ್ಸೆ’: ‘ಈ ಚಿಕಿತ್ಸಾಲಯಗಳ ಮೂಲಕ ವಾರ್ಷಿಕ 15 ಲಕ್ಷ ಕಾರ್ಮಿಕರಿಗೆ ಚಿಕಿತ್ಸೆ ನೀಡುವ ಗುರಿ ಇದೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್‌ ಹೇಳಿದರು.

‘ಪ್ರತಿ ಜಿಲ್ಲೆಗೆ ಕನಿಷ್ಠ ಮೂರು ಸಂಚಾರಿ ಚಿಕಿತ್ಸಾಲಯಗಳನ್ನು ನಿಯೋಜನೆ ಮಾಡಲಾಗುತ್ತದೆ. ಕೆಲವು ಜಿಲ್ಲೆಗೆ 5–6 ಬಸ್‌ಗಳು ದೊರೆಯಲಿವೆ. ಕಾರ್ಮಿಕರ ಕಲ್ಯಾಣ ಮಂಡಳಿಗೆ ಸೆಸ್‌ ನೀಡುತ್ತಿರುವ ನೋಂದಾಯಿತ ಕಾರ್ಮಿಕರೆಲ್ಲರೂ ಈ ಬಸ್‌ಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ’ ಎಂದರು.

‘ನೋಂದಣಿ ಮಾಡಿಕೊಳ್ಳದ ಕಾರ್ಮಿಕರು, ಬಸ್‌ನಲ್ಲಿಯೇ ನೋಂದಣಿ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬಹುದು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ, ಹತ್ತಿರದ ದೊಡ್ಡ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಹೊಣೆಯೂ ಸಂಚಾರಿ ಚಿಕಿತ್ಸಾಲಯಗಳಿಗೆ ಇದೆ’ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಶಾಸಕ ರಿಜ್ವಾನ್‌ ಅರ್ಷದ್‌ ಸಂಚಾರಿ ಚಿಕಿತ್ಸಾಲಯಗಳನ್ನು ಪರಿಶೀಲಿಸಿದರು. ಅವುಗಳಲ್ಲಿನ ಸವಲತ್ತುಗಳ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.

‘ಸಂಚಾರಿ ಆರೋಗ್ಯ ಘಟಕ’ ವಾಹನದ ಒಳನೋಟ    –ಪ್ರಜಾವಾಣಿ ಚಿತ್ರ

‘ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ’

‘ಕಟ್ಟಡ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಅವರಿಗಾಗಿ ವಸತಿ ಶಾಲೆ ಆರಂಭಿಸುತ್ತಿದ್ದೇವೆ’ ಎಂದು ಸಿದ್ದರಾಮಯ್ಯ ಘೋಷಿಸಿದರು. ‘ಕಾರ್ಮಿಕರ ಕಲ್ಯಾಣಕ್ಕೆ ಸರ್ಕಾರ ಕಟಿಬದ್ಧವಾಗಿದೆ. ಈ ಕಾರ್ಮಿಕರು ಕೆಲಸಕ್ಕೆ ಹೋಗುವಾಗ ಮಕ್ಕಳನ್ನೂ ಜತೆಗೆ ಕರೆದೊಯ್ಯುತ್ತಾರೆ. ಮುಂದೆ ಆ ಮಕ್ಕಳೂ ಬಾಲ ಕಾರ್ಮಿಕರಾಗುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿ ಅಂತಹ ಮಕ್ಕಳಿಗೆ ಉಚಿತ ವಸತಿಶಾಲೆಗಳನ್ನು ಆರಂಭಿಸುತ್ತಿದ್ದೇವೆ’ ಎಂದರು. ‘ಈ ಮಕ್ಕಳು ಬೇರೆ ಉದ್ಯೋಗಗಳಲ್ಲೂ ತೊಡಗಿಕೊಳ್ಳಬೇಕು. ಇದಕ್ಕಾಗಿ 6ರಿಂದ 12ನೇ ತರಗತಿವರೆಗೆ ಉಚಿತ ಊಟ–ಪಾಠ ವ್ಯವಸ್ಥೆ ಇರುವ ವಸತಿ ಶಾಲೆಗಳನ್ನು ಆರಂಭಿಸುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.