
ಬೆಂಗಳೂರು: ‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಾರಾಲಯ, ಬಾಹ್ಯಾಕಾಶ ಪ್ರಯೋಗಾಲಯಗಳಂತಹ ಸವಲತ್ತುಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ, ಸಂಚಾರಿ ತಾರಾಲಯಗಳನ್ನು ಒದಗಿಸಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ‘ಶಾಲೆಯ ಅಂಗಳದಲ್ಲಿ ತಾರಾಲಯ: ಡಿಜಿಟಲ್ ಸಂಚಾರಿ ತಾರಾಲಯ’ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ತಾರಾಲಯಗಳಂತಹ ಸವಲತ್ತುಗಳು ನಗರಗಳಿಗೆ ಸೀಮಿತವಾಗಿತ್ತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅದು ಸುಲಭವಾಗಿ ಲಭ್ಯವಿರಲಿಲ್ಲ. ಈ ಅಂತರವನ್ನು ಹೋಗಲಾಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಕೌತುಕವನ್ನು ಬಿತ್ತಿ, ವಿಜ್ಞಾನ ಕಲಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದು ನಮ್ಮ ಸರ್ಕಾರದ ಗುರಿ. ಈ ಯೋಜನೆ ಈಗಾಗಲೇ 17 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಿದೆ’ ಎಂದರು.
ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ‘ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಉದ್ದೇಶದಿಂದ ವಿಜ್ಞಾನ ಶಿಕ್ಷಣಕ್ಕೆ ನಮ್ಮ ಸರ್ಕಾರ ಒತ್ತು ನೀಡಿದೆ. ತಾರಾಲಯ ಕಲ್ಪನೆಗೆ ತಂತ್ರಜ್ಞಾನ ಮತ್ತು ಆಧುನಿಕ ಸವಲತ್ತುಗಳ ಸ್ಪರ್ಶ ನೀಡಿ, ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯಲಾಗುತ್ತಿದೆ. ಈಗ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿರುವ ಈ ಕಾರ್ಯಕ್ರಮವನ್ನು ಶೀಘ್ರವೇ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು’ ಎಂದರು.
Highlights - ಸಂಚಾರಿ ತಾರಾಲಯ * ಬಾಹ್ಯಾಕಾಶ ವೀಕ್ಷಣೆಗೆ 5 ಮೀಟರ್ ಅಳತೆಯ ಗೋಳ * 360 ಡಿಗ್ರಿಯ ಫಿಶ್ ಐ ಲೆನ್ಸ್ ಪ್ರೊಜೆಕ್ಟರ್ * ಅತ್ಯಾಧುನಿಕ ಕಂಪ್ಯೂಟರ್ ಮತ್ತು ಧ್ವನಿವರ್ಧಕ ವ್ಯವಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.