ADVERTISEMENT

ಶಾಲೆ, ಆಸ್ಪತ್ರೆ ಬಳಿ ಟವರ್‌ ನಿಷೇಧ

ಮೊಬೈಲ್‌ ಟವರ್‌ ಸ್ಥಾಪನೆಗೆ ಹೊಸ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 20:47 IST
Last Updated 3 ಜೂನ್ 2019, 20:47 IST
   

ಬೆಂಗಳೂರು: ಮೊಬೈಲ್‌ ಟವರ್‌ಗಳನ್ನು ಬೇಕಾಬಿಟ್ಟಿ ಅಳವಡಿಸುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ದೂರಸಂಪರ್ಕ ಮೂಲಸೌಕರ್ಯ(ಟವರ್) ನಿಯಂತ್ರಣ ಮಾರ್ಗಸೂಚಿಯೊಂದನ್ನು ಹೊರಡಿಸಿದೆ.

ಮಾರ್ಗಸೂಚಿ ಪ್ರಕಾರ, ಶಾಲೆಗಳು, ಪಾರಂಪರಿಕ ತಾಣ, ಆಸ್ಪತ್ರೆಗಳು, ಧಾರ್ಮಿಕ ಸ್ಥಳಗಳಲ್ಲಿ ಮೊಬೈಲ್‌ ಟವರ್‌ಗಳನ್ನು ಅಳವಡಿಸುವಂತಿಲ್ಲ. ಈಗಾಗಲೇ ಇಂತಹ ಸ್ಥಳಗಳಲ್ಲಿ ಇರುವ ಮೊಬೈಲ್‌ ಟವರ್‌ಗಳನ್ನು ಸಕ್ರಮಗೊಳಿಸಲು ಮೂರು ತಿಂಗಳ ಅವಕಾಶ ನೀಡಲಾಗಿದೆ.

ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಈ ವಿವರ ನೀಡಿದರು.

ADVERTISEMENT

ನದಿ, ಕೆರೆ, ನಾಲಾ, ಕೊಳ್ಳಗಳ ಸಮೀಪದಲ್ಲಿ ಮೊಬೈಲ್‌ ಟವರ್‌ ಅಥವಾ ಕಟ್ಟಡ ನಿರ್ಮಿಸುವಂತಿಲ್ಲ. ಇವುಗಳಿಂದ ಎಷ್ಟು ದೂರದಲ್ಲಿ ಟವರ್‌ ಅಥವಾ ಕಟ್ಟಡ ಸ್ಥಾಪಿಸಬೇಕು ಎಂಬ ಮಿತಿಯನ್ನು ವಿಧಿಸಲಾಗಿದೆ. ರೈಲ್ವೆ ಸ್ವತ್ತಿನ ಗಡಿಯಿಂದ 30 ಮೀಟರ್‌ ದೂರದಲ್ಲಿರಬೇಕು. ವಿದ್ಯುತ್‌ ಲೇನುಗಳಿಂದ ಎಷ್ಟು ಅಂತರದಲ್ಲಿ ಸ್ಥಾಪಿಸಬೇಕು ಎಂಬ ಮಾಹಿತಿಯನ್ನು ಮಾರ್ಗಸೂಚಿಯಲ್ಲಿ ನೀಡಲಾಗಿದೆ ಎಂದರು.

ಪಾರಂಪರಿಕ ತಾಣ: ಐತಿಹಾಸಿಕ ಸಂರಕ್ಷಿತ ತಾಣದಿಂದ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಟವರ್‌ ಅಥವಾ ದೂರಸಂಪರ್ಕ ಕಟ್ಟಡ ಸ್ಥಾಪನೆಗೆ ಅವಕಾಶ ಇರುವುದಿಲ್ಲ. 100 ಮೀಟರ್‌ನಿಂದ 200 ಮೀಟರ್‌ ವ್ಯಾಪ್ತಿಯಲ್ಲಿ ಸಂರಕ್ಷಿತ ತಾಣವಿದ್ದರೆ, ಒಂದು ಟವರ್‌ಗೆ ಅವಕಾಶ ನೀಡಲಾಗುವುದು. ಶಾಲೆ, ಆಸ್ಪತ್ರೆ, ದೇವಸ್ಥಾನ ಅಥವಾ ಧಾರ್ಮಿಕ ಕಟ್ಟಡಗಳಿಂದ 50 ಮೀಟರ್‌ ವ್ಯಾಪ್ತಿಯಲ್ಲಿ ಟವರ್‌ ಸ್ಥಾಪನೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.

ಮೊಬೈಲ್‌ ಟವರ್‌ ಅಳವಡಿಕೆಗೆ ಆಯಾ ಸ್ಥಳೀಯ ಸಂಸ್ಥೆಗಳಿಂದ ಸಂಬಂಧ ಪಟ್ಟ ಟೆಲಿಕಾಂ ಕಂಪನಿಗಳು ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಕಾರ್ಪೊರೇಷನ್‌ಗಳಲ್ಲಿ ಆಯುಕ್ತರು, ಟೌನ್‌ ಮುನ್ಸಿಪಲ್‌ ಕೌನ್ಸಿಲ್‌ನಲ್ಲಿ ಸಿಒ, ಟೌನ್‌ ಪಂಚಾಯತ್‌ನಲ್ಲಿ ಪಿಡಿಒಗಳು ಅನುಮತಿ ನೀಡುವ ಅಧಿಕಾರ ಹೊಂದಿರುತ್ತಾರೆ ಎಂದು ಖಾದರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.