ಬೆಂಗಳೂರು: ನಗರದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಅತ್ಯಾಧುನಿಕ ಪ್ರೋಟಾನ್ ಚಿಕಿತ್ಸಾ ಸೌಲಭ್ಯವನ್ನು ಆರಂಭಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.
ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಈ ಸೌಲಭ್ಯ ದೇಶದಲ್ಲೇ ಪ್ರಥಮವಾಗಲಿದೆ. ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಅದರಲ್ಲೂ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಆಧುನಿಕ ಮತ್ತು ವಿಶೇಷ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ ತಿಳಿಸಿದ್ದಾರೆ.
ಈ ಸೌಲಭ್ಯವನ್ನು ಒದಗಿಸಲು ₹500 ಕೋಟಿ ಅನುದಾನ ನೀಡುವಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಾಟೀಲ ಅವರು ಮನವಿ ಪತ್ರವೊಂದನ್ನೂ ನೀಡಿದ್ದಾರೆ.
ಕಿದ್ವಾಯಿ ಸಂಸ್ಥೆಯು ದೇಶದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಒಂದು. ಇಲ್ಲಿ ವಾರ್ಷಿಕವಾಗಿ 21 ಸಾವಿರಕ್ಕೂ ಹೆಚ್ಚು ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ವಿಕಿರಣ ಚಿಕಿತ್ಸೆಯಲ್ಲಿ ಕ್ಯಾನ್ಸರ್ ಗಡ್ಡೆಯ ಅಕ್ಕಪಕ್ಕದ ಭಾಗಗಳಿಗೂ ಪರಿಣಾಮವಾಗುವ ಸಾಧ್ಯತೆ ಇರುತ್ತದೆ. ಆದರೆ, ಸುಧಾರಿತ ರೂಪವಾದ ಪ್ರೋಟಾನ್ ಚಿಕಿತ್ಸೆಯು ಗಡ್ಡೆಯ ಬಳಿ ನಿರ್ಣಾಯಕ ಅಂಗಗಳಿಗೆ ಯಾವುದೇ ರೀತಿಯ ಹಾನಿ ಉಂಟು ಮಾಡುವುದಿಲ್ಲ. ವಿಶೇಷವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ದೀರ್ಘಕಾಲೀನ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
‘ಗಾಮಾ ಕಿರಣಗಳು ಅಥವಾ ಕ್ಷ– ಕಿರಣಗಳನ್ನು ಬಳಸುವುದು ಸಾಂಪ್ರದಾಯಿಕ ರೇಡಿಯೊ ಥೆರಪಿಗಿಂತ ಭಿನ್ನ. ಪ್ರೋಟಾನ್ ಚಿಕಿತ್ಸೆಯು ನಿಖರವಾಗಿ ಸಮಸ್ಯೆ ಇರುವ ಜಾಗಕ್ಕೆ ಮಾತ್ರ ಚಿಕಿತ್ಸೆ ಒದಗಿಸುತ್ತದೆ. ಇದರಿಂದ ಹಾನಿ ಪ್ರಮಾಣವೂ ಕಡಿಮೆ’ ಎಂದು ಪಾಟೀಲ ವಿವರಿಸಿದ್ದಾರೆ.
‘ಪ್ರೋಟಾನ್ ಚಿಕಿತ್ಸೆಯು ಮಕ್ಕಳ ಕ್ಯಾನ್ಸರ್ ಪ್ರಕರಣಗಳು, ವಿಶೇಷವಾಗಿ ಎನ್‌ಎಫ್–1 ಮತ್ತು ರೆಟಿನೋಬ್ಲಾಸ್ಟೊಮಾದಂತಹ ಆನುವಂಶಿಕ ಪ್ರಕಾರಗಳು ಮತ್ತು ಕಣ್ಣು, ತಲೆಬುರುಡೆಯ ಬುಡ, ಬೆನ್ನುಮೂಳೆ, ಯಕೃತ್ತು, ಪ್ರಾಸ್ಟೇಟ್, ಸ್ತನ, ತಲೆ ಮತ್ತು ಕುತ್ತಿಗೆ ಹಾಗೂ ಪ್ಯಾರಾನಾಸಲ್ ಸೈನಸ್ ಕ್ಯಾನ್ಸರ್‌ಗಳು ಸೇರಿ ವ್ಯಾಪಕ ಶ್ರೇಣಿಯ ಇತರ ಮಾರಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ. ಮರು–ವಿಕಿರಣ ಪ್ರಕರಣಗಳು ಮತ್ತು ತೆಗೆದು ಹಾಕಲಾದ ಗಡ್ಡೆಗಳ ಪ್ರಕರಣಗಳಿಗೂ ಬಳಸಬಹುದಾಗಿದೆ. ಇದರಿಂದ ಗುಣಮುಖರಾಗುವ ಸಾಧ್ಯತೆ ಹೆಚ್ಚು’ ಎಂದು ಅವರು ಹೇಳಿದ್ದಾರೆ.
1.2 ಲಕ್ಷ ರೋಗಿಗಳಿಗೆ ಪ್ರೋಟಾನ್ ಚಿಕಿತ್ಸೆ
2025 ರ ವೇಳೆಗೆ ದೇಶದಲ್ಲಿ 1.2 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಪ್ರೋಟಾನ್ ಚಿಕಿತ್ಸೆಯ ಅಗತ್ಯವಿರಬಹುದು ಎಂದು ಅಂದಾಜಿಸಲಾಗಿದೆ. ಕಿದ್ವಾಯಿಯಲ್ಲಿರುವ ಈ ಸೌಲಭ್ಯವು ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆಗೆ ಆರೈಕೆ ಒದಗಿಸುವುದಲ್ಲದೇ ನಿಮ್ಹಾನ್ಸ್ ಮತ್ತು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಿಂದ ಉಲ್ಲೇಖಿತ ಪ್ರಕರಣಗಳಿಗೂ ಚಿಕಿತ್ಸೆ ನೀಡಲು ಸಹಕಾರಿಯಾಗಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.