ಸಂತೋಷ್ ಲಾಡ್
ಬೆಂಗಳೂರು: ‘ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವ ಆಧಾರದಲ್ಲಿ ಕದನ ವಿರಾಮ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ತಾವೇ ಸುಪ್ರೀಂ ಎಂಬಂತೆ ವರ್ತಿಸುತ್ತಿದ್ದಾರೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕದನ ವಿರಾಮದ ಬಳಿಕವೂ ಪಾಕಿಸ್ತಾನ ದಾಳಿ ನಡೆಸಿದೆ. ಸರ್ಕಾರಕ್ಕೆ ದೇಶದ ಜನತೆಯ ಬೆಂಬಲ ಇತ್ತು. ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಬೇಕು ಎಂಬ ನಿರೀಕ್ಷೆ ಇತ್ತು. ಆದರೆ, ಯಾವ ಆಧಾರದಲ್ಲಿ ಕದನ ವಿರಾಮ ಘೋಷಿಸಿದ್ದಾರೆ. ಎಲ್ಲವೂ ನಿಮ್ಮದೇ ನಿರ್ಧಾರವೇ’ ಎಂದು ಪ್ರಧಾನಿಯನ್ನು ಪ್ರಶ್ನಿಸಿದರು.
‘ದೇಶದಲ್ಲಿ ಯಾರೂ ಅಂತಿಮ ಅಲ್ಲ. ಬರುತ್ತಾರೆ, ಹೋಗುತ್ತಾರೆ. ಆದರೆ, ಅಂತಿಮವಲ್ಲ. ದೇಶವೇ ಅಂತಿಮ ಹೊರತು ವ್ಯಕ್ತಿಯಲ್ಲ’ ಎಂದರು.
‘ಪಾಕಿಸ್ತಾನ ಗೋಗರೆದ ಕಾರಣ ಕದನ ವಿರಾಮಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ತಮ್ಮ ಭಾಷಣದಲ್ಲಿ ಮೋದಿ ಹೇಳಿದ್ದಾರೆ. ಆದರೆ, ಅದಕ್ಕೂ ಮೊದಲು ಅಮೆರಿಕದ ಅಧ್ಯಕ್ಷ ಟ್ರಂಪ್ ಕದನ ವಿರಾಮ ಪ್ರಸ್ತಾಪಿಸಿದ್ದರು. ಅಮೆರಿಕ ಅಧ್ಯಕ್ಷರ ಮೂಲಕ ಕದನ ವಿರಾಮ ತಿಳಿದುಕೊಳ್ಳಬೇಕಾಯಿತು. ಟ್ರಂಪ್ ಹೇಳಿದ ಮಾದರಿಯಲ್ಲಿ ವ್ಯಾಪಾರಕ್ಕಾಗಿ ಯುದ್ಧ ನಿಲ್ಲಿಸಲಾಯಿತೇ’ ಎಂದು ಪ್ರಶ್ನಿಸಿದರು.
‘ಬಿಜೆಪಿಯವರು ತಿರಂಗಾ ಯಾತ್ರೆ ಮಾಡುತ್ತಿದ್ದಾರೆ. ಅವರು ತಿರಂಗಾ ಯಾತ್ರೆ ಬದಲು ಟ್ರಂಪ್ ಯಾತ್ರೆ ಮಾಡಲಿ’ ಎಂದರು.
‘ಕಳೆದ 20 ದಿನಗಳಿಂದ ದೇಶದಲ್ಲಿ ಏನಾಗಿದೆ ಎಂದು ಜನರಿಗೆ ಗೊತ್ತಿದೆ. ದೇಶವನ್ನು ಎಲ್ಲ ಸೇನಾ ಪಡೆಗಳು ಕಾಪಾಡಿವೆ. ಪಾಕಿಸ್ತಾನದ ಮೇಲೆ ದಾಳಿ ನಡೆಸುವಲ್ಲಿ ಯಶಸ್ವಿ ಆಗಿದ್ದೇವೆ. ಆದರೂ ಕೆಲವೊಂದು ಪ್ರಶ್ನೆಗಳು ಮೂಡುತ್ತಿವೆ. ಪ್ರತಿಯೊಂದು ವಿಚಾರಕ್ಕೂ ಪ್ರಧಾನಿ ಅವರೆನ್ನೇ ಸುಪ್ರೀಂ ಎಂಬಂತೆ ಬಿಂಬಿಸಲಾಗುತ್ತಿದೆ’ ಎಂದರು.
‘ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದ ನಂತರ ಪ್ರಧಾನಿ ಮೋದಿ ವಿದೇಶ ಪ್ರವಾಸ ಮೊಟಕುಗೊಳಿಸಿ ವಾಪಸ್ ಆಗುತ್ತಾರೆ. ವಾಪಸ್ ಬಂದ ನಂತರ ಅವರು ಬಿಹಾರ ಚುನಾವಣಾ ಪ್ರಚಾರಕ್ಕೆ ತೆರಳುತ್ತಾರೆ. ಆದರೆ, ಸರ್ವಪಕ್ಷಗಳ ಸಭೆಗೆ ಭಾಗವಹಿಸುವುದೇ ಇಲ್ಲ. ಒಂದು ರೀತಿಯಲ್ಲಿ ನಾನೇ ಸುಪ್ರೀಂ ಎಂಬಂತೆ ವರ್ತಿಸುತ್ತಾರೆ’ ಎಂದರು.
‘ಮೋದಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅವರು ಸಂಸತ್ತಿಗೂ ಬರುತ್ತಿಲ್ಲ. ಸರ್ವಪಕ್ಷ ಸಭೆಗೂ ಬರುತ್ತಿಲ್ಲ. ದೇಶದ 140 ಕೋಟಿ ಜನ ಯುದ್ಧ ಮಾಡಬೇಕೆಂಬ ನಿರೀಕ್ಷೆ ಹೊಂದಿದ್ದರು. ಯಾಕೆ ಯುದ್ಧ ಆಗಬಾರದು, ಮಾಡಬೇಕಿತ್ತು. ದೇಶದ ಜನರು ಇದನ್ನೇ ಬಯಸಿದ್ದರು. ಆದರೆ, ರಾತ್ರೋರಾತ್ರಿ ಕದನ ವಿರಾಮ ಘೋಷಿಸುತ್ತಾರೆ. ಯಾವ ಕಾರಣಕ್ಕಾಗಿ ಕದನ ವಿರಾಮ ಮಾಡಿದ್ದೀರಿ? ಈ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರ ಕೊಡಬೇಕು’ ಎಂದರು.
‘ಯಾವುದೇ ದಾಳಿ ನಡೆದಾಗಲೂ ಬಿಜೆಪಿ ಪ್ರಚಾರಕ್ಕೆ ಬಳಸಿಕೊಳ್ಳುತ್ತದೆ. ಸೈನ್ಯಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದೇವೆ ಎಂದು ಮೋದಿ ಹೇಳಿದ್ದರು. ಸೈನ್ಯ ಹೇಳಿದ ಮೇಲೆ ಕದನ ವಿರಾಮ ಮಾಡಲಾಯಿತೇ? ಈ ಬಗ್ಗೆ ಮೋದಿ ಸ್ಪಷ್ಟನೆ ನೀಡಬೇಕಲ್ಲವೇ? ಯುದ್ಧ ನಡೆದರೆ ಯಾವ ಪಕ್ಷಗಳು ಮಧ್ಯಪ್ರವೇಶ ಮಾಡಲ್ಲ. ಸೈನ್ಯಕ್ಕೆ ಮುಕ್ತ ಅವಕಾಶ ನೀಡಲಾಗುತ್ತದೆ. ಈ ಕದನ ವಿರಾಮ ಮಾಡಲು ಕಾರಣ ಯಾರು? ಇದಕ್ಕೆ ಮೋದಿ ಉತ್ತರ ನೀಡುತ್ತಿಲ್ಲ ಯಾಕೆ’ ಎಂದು ಪ್ರಶ್ನಿಸಿದರು.
‘ಪಾಕಿಸ್ತಾನ ಶರಣಾಗಿದೆ ಎಂದು ಮೋದಿ ಹೇಳಿದ್ದಾರೆ. ಇದಕ್ಕೆ ಯಾಕೆ ಒಪ್ಪಬೇಕು, ಜನರ ಅಭಿಪ್ರಾಯ ಕೇಳಬೇಕಲ್ಲವೇ? ಮೋದಿ ಸರ್ವಾಧಿಕಾರಿ ಆಗಿದ್ದಾರೆ ಅಂತ ನಿಮಗೆ ಅನಿಸುತ್ತಿಲ್ಲವೇ’ ಎಂದೂ ಕೇಳಿದರು.
‘ಯಾವುದೇ ದಾಳಿ ಬಗ್ಗೆ ನನಗೆ ಸಂಶಯ ಇಲ್ಲ. ಆದರೆ, ದಾಳಿ ನಡೆದಾಗಲೆಲ್ಲಾ ಬಿಜೆಪಿ ಪ್ರಚಾರ ಪಡೆದುಕೊಳ್ಳುತ್ತಿದೆ. ಮೋದಿ ಒಬ್ಬರನ್ನೇ ಯಾಕೆ ಬಿಂಬಿಸಲಾಗುತ್ತದೆ. ಒಬ್ಬರೇ ಎಲ್ಲವನ್ನೂ ಮಾಡಿದರೆಂದು ಯಾಕೆ ಕ್ರೆಡಿಟ್? ಯುದ್ಧದ ಎಲ್ಲ ಕ್ರೆಡಿಟ್ ದೇಶದ ಸೈನಿಕರಿಗೆ ಹೋಗಲಿ’ ಎಂದರು.
‘ಕಳೆದ 11 ವರ್ಷದಿಂದಲೂ ಅವರದ್ದೆ ಕ್ಯಾಮೆರಾ. ಅವರು ಹೇಳಿ್ದೇ ಮಾತು ಆಗಿದೆ. ಪಂಚಾಯತಿಯಿಂದ ಸಂಸತ್‌ವರೆಗೆ ಅವರನ್ನೇ ತೋರಿಸಲಾಗುತ್ತಿದೆ’ ಎಂದರು.
ಖುರೇಷಿ ವಿರುದ್ಧದ ಹೇಳಿಕೆ ನಾಚಿಕೆಗೇಡು: ಮಧ್ಯಪ್ರದೇಶದ ಬಿಜೆಪಿ ನಾಯಕ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಲಾಡ್, ‘ಸೋಫಿಯಾ ಖುರೇಷಿ ವಿರುದ್ಧದ ಹೇಳಿಕೆ ನಾಚಿಕೆಗೇಡು’ ಎಂದರು.
‘ಮಧ್ಯಪ್ರದೇಶ ಹೈಕೋರ್ಟ್ ಇದೀಗ ಎಫ್‌ಐಆರ್ ಮಾಡಲು ಸೂಚಿಸಿದೆ. ಸೋಫಿಯಾ ಖುರೇಷಿ ಅವರು ಈ ದೇಶವನ್ನು ಪ್ರತಿನಿಧಿಸುತ್ತಾರೆ. ಆದರೆ, ದೇಶದಲ್ಲಿ ಏನು ಬೇಕಾದರೂ ಮಾತನಾಡಬಹುದು ಎಂಬಂತಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.