ADVERTISEMENT

ರೈಲು ನಿಲ್ದಾಣ ಮೇಲ್ದರ್ಜೆಗೆ: ಕಾಮಗಾರಿಗಳಿಗೆ ಇದೇ 26ಕ್ಕೆ ಮೋದಿ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 15:35 IST
Last Updated 23 ಫೆಬ್ರುವರಿ 2024, 15:35 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಬೆಂಗಳೂರು: ಅಮೃತ್‌ ಭಾರತ್‌ ಸ್ಟೇಷನ್‌ ಸ್ಕೀಮ್‌ (ಎಬಿಎಸ್‌ಎಸ್‌) ಅಡಿ ನೈರುತ್ಯ ರೈಲ್ವೆಯ 15 ರೈಲು ನಿಲ್ದಾಣಗಳು ಮೇಲ್ದರ್ಜೆಗೆ ಏರಲಿವೆ. ಫೆ. 26ರಂದು ಪ್ರಧಾನಿ ನರೇಂದ್ರ ಮೋದಿ ಈ ಕಾಮಗಾರಿಗಳಿಗೆ ವರ್ಚುವಲ್‌ ಮೂಲಕ ಚಾಲನೆ ನೀಡಲಿದ್ದಾರೆ.

ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎಂ. ಯೋಗೇಶ್ ಮೋಹನ್ ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಭಾರತೀಯ ರೈಲ್ವೆ ಜಾಲದ ರೈಲು ನಿಲ್ದಾಣಗಳನ್ನು ಆಧುನೀಕರಣಗೊಳಿಸಲು ಪ್ರಧಾನಮಂತ್ರಿಯವರು ಎಬಿಎಸ್‌ಎಸ್‌ ಯೋಜನೆ ರೂಪಿಸಿದ್ದಾರೆ. ಅದರಲ್ಲಿ ನೈರುತ್ಯ ರೈಲ್ವೆಯ 15 ನಿಲ್ದಾಣಗಳು ಮೊದಲ ಹಂತದಲ್ಲಿ ಸೇರಿದೆ ಎಂದು ತಿಳಿಸಿದರು.

ADVERTISEMENT

ರೈಲ್ವೆ ನಿಲ್ದಾಣಕ್ಕೆ ಉತ್ತಮ ಪ್ರವೇಶದ್ವಾರ, ಕಾಯುವ ಸ್ಥಳ, ಲಿಫ್ಟ್‌, ಎಸ್ಕಲೇಟರ್‌, ಸ್ವಚ್ಛತೆ, ಉಚಿತ ವೈಫೈ ವ್ಯವಸ್ಥೆ, ‘ಒಂದು ನಿಲ್ದಾಣ ಒಂದು ಉತ್ಪನ್ನ’ ವ್ಯವಸ್ಥೆ, ಮಾಹಿತಿ ವ್ಯವಸ್ಥೆ ಸಹಿತ ಅನೇಕ ಸೌಲಭ್ಯಗಳನ್ನು ಈ ಯೋಜನೆ ಒಳಗೊಂಡಿದೆ ಎಂದು ಹೇಳಿದರು.

ನೈರುತ್ಯ ರೈಲ್ವೆ ವ್ಯಾಪ್ತಿಯ ಬಂಗಾರಪೇಟೆ, ಚನ್ನಪಟ್ಟಣ, ಧರ್ಮಪುರಿ, ದೊಡ್ಡಬಳ್ಳಾಪುರ, ಹಿಂದೂಪುರ, ಹೊಸೂರು, ಕೆಂಗೇರಿ, ಕೃಷ್ಣರಾಜಪುರ, ಕುಪ್ಪಂ, ಮಲ್ಲೇಶ್ವರ, ಮಾಲೂರು, ಮಂಡ್ಯ, ರಾಮನಗರ, ತುಮಕೂರು, ವೈಟ್ ಫೀಲ್ಡ್ ರೈಲು ನಿಲ್ದಾಣಗಳು ಒಟ್ಟು ₹ 372.13 ಕೋಟಿ ವೆಚ್ಚದಲ್ಲಿ ಉನ್ನತೀಕರಣಗೊಳ್ಳಲಿವೆ ಎಂದು ಮಾಹಿತಿ ನೀಡಿದರು.

ಇದಲ್ಲದೇ ಹೆಚ್ಚುವರಿಯಾಗಿ ಚನ್ನಪಟ್ಟಣ–ಶೆಟ್ಟಿಹಳ್ಳಿ ಲೆವೆಲ್‌ ಕ್ರಾಸಿಂಗ್ ಬದಲಾಗಿ ಆರ್‌ಯುಬಿ (ರೈಲ್ವೆ ಅಂಡರ್‌ ಬ್ರಿಡ್ಜ್‌), ಮಕ್ಕಾಜಿಪಲ್ಲಿ–ನಾಗಸಮುದ್ರಂ ನಡುವಿನ ಲೆವೆಲ್‌ ಕ್ರಾಸಿಂಗ್‌ ಬದಲು ಆರ್‌ಯುಬಿ, ಕುಂಬಾರಿಕೆ ಪಟ್ಟಣದಲ್ಲಿ ಆರ್‌ಒಬಿ (ರೈಲ್ವೆ ಓವರ್‌ ಬ್ರಿಜ್‌) ಮುಂತಾದ ಕಾಮಗಾರಿಗಳಿಗೂ ‍ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.