ADVERTISEMENT

ಶಾಸಕರ ನಿಧಿ ಬಳಕೆ ಮಾರ್ಗಸೂಚಿ ಪರಿಷ್ಕರಣೆ: ಎನ್‌.ಮುನಿರತ್ನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 11:13 IST
Last Updated 29 ಜನವರಿ 2022, 11:13 IST
ಎನ್‌.ಮುನಿರತ್ನ
ಎನ್‌.ಮುನಿರತ್ನ   

ಚಿತ್ರದುರ್ಗ: ಶಾಸಕರ ನಿಧಿಯನ್ನು ಕಾಲಮಿತಿಯಲ್ಲಿ ಬಳಕೆ ಮಾಡುವ ಹಾಗೂ ಹೊಣೆಗಾರಿಕೆ ನಿಗದಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಮಾರ್ಗಸೂಚಿ ಬದಲಾವಣೆ ಮಾಡಲಿದೆ ಎಂದು ಯೋಜನೆ ಮತ್ತು ಸಾಂಖಿಕ ಸಚಿವ ಎನ್‌.ಮುನಿರತ್ನ ತಿಳಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಶಾಸಕರ ನಿಧಿ ಬಳಕೆಗೆ ಸಂಬಂಧಿಸಿದಂತೆ ಸಾಕಷ್ಟು ತಕರಾರುಗಳು ಬರುತ್ತಿವೆ. ನಿಗದಿತ ಆರ್ಥಿಕ ವರ್ಷದಲ್ಲಿ ಅನುದಾನ ಬಳಕೆ ಆಗದಿರುವ ಬಗ್ಗೆ ಅಸಮಾಧಾನವಿದೆ. ರಾಜ್ಯಕ್ಕೆ ಅನ್ವಯವಾಗುವ ರೀತಿಯಲ್ಲಿ ಮಾರ್ಗಸೂಚಿ ಬದಲಾವಣೆ ಮಾಡಲು ಚಿಂತನೆ ನಡೆಸಲಾಗಿದೆ’ ಎಂದು ಹೇಳಿದರು.

‘ಪ್ರತಿ ಶಾಸಕರಿಗೆ ವರ್ಷಕ್ಕೆ ₹ 2 ಕೋಟಿ ಅನುದಾನ ನೀಡಲಾಗುತ್ತದೆ. ಅನುದಾನ ಬಿಡುಗಡೆ ಮಾಡುವಾಗಲೇ ಕೆಲ ಷರತ್ತು ವಿಧಿಸುವ ಅಗತ್ಯವಿದೆ. ಕ್ರಿಯಾಯೋಜನೆ ಗಮನಿಸಿ ಕಾಲಮಿತಿ ನಿಗದಿಪಡಿಸಲಾಗುತ್ತದೆ. ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಿ ಅನುದಾನ ಬಳಸದಿದ್ದರೆ ಸಂಬಂಧಿಸಿದ ಅಧಿಕಾರಿ ಹಾಗೂ ಗುತ್ತಿಗೆದಾರರನ್ನು ಹೊಣೆ ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

ಬಿಜೆಪಿ ಗೌರವಿಸಿದೆ: ಮುನಿರತ್ನ

‘ಎಲ್ಲರನ್ನೂ ಬಿಜೆಪಿ ಗೌರವದಿಂದ ನೋಡಿಕೊಳ್ಳುತ್ತಿದೆ. ನಾವೂ ಒಗ್ಗಟ್ಟಿನಿಂದ ಇದ್ದು, ಗೌರವದಿಂದ ನಡೆದುಕೊಳ್ಳುತ್ತೇವೆ. ಯಾರೊಬ್ಬರು ಪಕ್ಷ ಬಿಟ್ಟು ಹೋಗುವುದಿಲ್ಲ’ ಎಂದು ಸಚಿವ ಮುನಿರತ್ನ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸರ್ಕಾರಕ್ಕೆ ಉತ್ತಮ ಸಲಹೆಗಳನ್ನು ನೀಡಬೇಕಿತ್ತು. ಜನಪರ ಕೆಲಸಗಳನ್ನು ಬೆಂಬಲಿಸುವ ಬದಲು ರಾಜಕಾರಣ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿ ವರ್ಷ ಶಾಸಕರ ನಿಧಿಗೆ ₹ 10 ಕೋಟಿ ನೀಡಿದರೂ ಬಳಕೆ ಮಾಡುವ ಸಾಮರ್ಥ್ಯವಿದೆ. ಕೆಲ ತಾಂತ್ರಿಕ ತೊಂದರೆಯ ಕಾರಣಕ್ಕೆ ಅನುದಾನ ಉಳಿಕೆ ಎಂದು ತೋರಿಸಲಾಗುತ್ತಿದೆ.

- ಜಿ.ಎಚ್‌.ತಿಪ್ಪಾರೆಡ್ಡಿ,ಶಾಸಕ, ಚಿತ್ರದುರ್ಗ

ಶಾಸಕರ ನಿಧಿ ಹಲವು ಇಲಾಖೆಗಳಿಗೆ ಹಂಚಿಕೆಯಾಗುತ್ತದೆ. ಇಲಾಖೆಗಳ ನಡುವಿನ ಸಮನ್ವಯದ ಕೊರತೆಯ ಕಾರಣಕ್ಕೆ ತೊಂದರೆ ಉಂಟಾಗುತ್ತಿದೆ. ಶಾಸಕರಿಗೆ ಕೆಟ್ಟ ಹೆಸರು ಬರುತ್ತಿದೆ.

- ಕೆ.ಪೂರ್ಣಿಮಾ,ಶಾಸಕಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.