ADVERTISEMENT

ಚುನಾವಣೆಯಲ್ಲಿ ಮೋದಿ ಮಗ್ನರಾದದ್ದೇ ಬಿಕ್ಕಟ್ಟಿಗೆ ಕಾರಣ: ಎಚ್‌.ಡಿ. ದೇವೇಗೌಡ ಆರೋಪ

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 24 ಮೇ 2021, 21:41 IST
Last Updated 24 ಮೇ 2021, 21:41 IST
ಎಚ್‌.ಡಿ. ದೇವೇಗೌಡ
ಎಚ್‌.ಡಿ. ದೇವೇಗೌಡ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಐದು ರಾಜ್ಯಗಳ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಹಟಕ್ಕೆ ಬಿದ್ದು, ಕೊರೊನಾ ನಿಯಂತ್ರಣ ಮರೆತರು. ಅದರಿಂದಾಗಿಯೇ ದೇಶದಲ್ಲಿ ಕೋವಿಡ್‌ ಎರಡನೇ ಅಲೆ ವ್ಯಾಪಕವಾಗಿ ಹಬ್ಬಿದೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಆರೋಪಿಸಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಕೋವಿಡ್‌ ಮೊದಲ ಅಲೆಯನ್ನು ಮೋದಿ ಸಮರ್ಥವಾಗಿ ನಿಯಂತ್ರಿಸಿದ್ದಾರೆ ಎಂದು ಎಲ್ಲರೂ ಹೊಗಳಿದ್ದರು. ಆದರೆ, ಎರಡನೇ ಅಲೆಯಲ್ಲಿ ಸೋಂಕು ತೀವ್ರವಾಗಿ ಹೆಚ್ಚುತ್ತಿದೆ. ಕಪ್ಪು ಶಿಲೀಂಧ್ರ ಮತ್ತು ಬಿಳಿ ಶಿಲೀಂಧ್ರದ ಸೋಂಕು ಕೂಡ ಆತಂಕ ಹುಟ್ಟಿಸಿವೆ. ಈ ಕುರಿತು ವಿದೇಶಗಳ ತಜ್ಞರೂ ಮಾತನಾಡುತ್ತಿದ್ದಾರೆ’ ಎಂದರು.

ಚುನಾವಣೆಯ ಬದಲಿಗೆ ಕೋವಿಡ್‌ ನಿರ್ವಹಣೆಗೆ ಪ್ರಧಾನಿ ಗಮನ ನೀಡಿದ್ದರೆ ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಅನಿಸುತ್ತದೆ. ಈ ಬಾರಿ ಹೆಚ್ಚು ಸಮಸ್ಯೆ ಆಗಿರುವುದಕ್ಕೆ ಅದೇ ಕಾರಣ ಇರಬಹುದು ಎಂದು ಹೇಳಿದರು.

ADVERTISEMENT

‘ಕೊರೊನಾ ನಿಯಂತ್ರಣದ ವಿಚಾರದಲ್ಲಿ ಪ್ರಧಾನಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು 12 ಸಲಹೆಗಳನ್ನು ನೀಡಿದ್ದೆ. ಅವುಗಳಲ್ಲಿ ಕೆಲವನ್ನು ಕಾರ್ಯಗತಗೊಳಿಸಿದ್ದಾರೆ. ರೆಮ್‌ಡಿಸಿವಿರ್‌ ಚುಚ್ಚುಮದ್ದು ಕಳ್ಳ ದಾರಿಯಲ್ಲಿ ಮಾರಾಟವಾಗುತ್ತಿದೆ. ಈ ವಿಚಾರದಲ್ಲಿ ಆಡಳಿತದಲ್ಲಿ ಕೆಲವು ಲೋಪಗಳು ಇರಬಹುದು. ಅದನ್ನು ಸರಿಪಡಿಸುವ ಕೆಲಸವನ್ನು ಸರ್ಕಾರ ತಕ್ಷಣ ಮಾಡಬೇಕು’ ಎಂದು ದೇವೇಗೌಡ ಒತ್ತಾಯಿಸಿದರು.

ಕೇಂದ್ರದಿಂದ ತಾರತಮ್ಯ:‘ಲಸಿಕೆ, ಔಷಧಿ, ವೆಂಟಿಲೇಟರ್‌ ಮತ್ತು ಆಮ್ಲಜನಕ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದೆ ಎನ್ನುವ ವಿಚಾರದಲ್ಲಿ ಪ್ರಧಾನಿಗೆ ಪತ್ರ ಬರೆದಿದ್ದೇನೆ. ಎಚ್‌.ಡಿ. ಕುಮಾರಸ್ವಾಮಿ ಕೂಡ ಹಲವು ಬಾರಿ ಮಾತನಾಡಿದ್ದಾರೆ. ಹಣಕಾಸು ಹಂಚಿಕೆಯಲ್ಲೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.