ADVERTISEMENT

'ಮೋದಿ' ಉಪನಾಮಕ್ಕೆ ಅಪಮಾನ ಪ್ರಕರಣ: ರಾಹುಲ್‌ ಬೆಂಬಲಕ್ಕೆ ನಿಂತ ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮಾರ್ಚ್ 2023, 8:43 IST
Last Updated 24 ಮಾರ್ಚ್ 2023, 8:43 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರಿಗೆ ಗುಜರಾತ್‌ನ ನ್ಯಾಯಾಲಯವು 2019ರಲ್ಲಿ ದಾಖಲಾದ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದಕ್ಕೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯದ ತೀರ್ಪು ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಅವರು, ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಅಲ್ಲ, ಇದು ಇಡೀ ದೇಶದ ಜನತೆಗೆ ಸಂಬಂಧಿಸಿದ್ದು. ಸರ್ಕಾರದ ವಿರುದ್ದ ಮಾತನಾಡಿದವರ ಮೇಲೆ ನೂರಾರು ಸುಳ್ಳು ಪ್ರಕರಣಗಳನ್ನು ಬಿಜೆಪಿ ಸರ್ಕಾರ ದಾಖಲಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದೆ.

‘ಸೂರತ್ ಸೆಷನ್ಸ್ ನ್ಯಾಯಾಲಯದ ತೀರ್ಪು ಅಂತಿಮ ಅಲ್ಲ, ಮೇಲಿನ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ಭರವಸೆ ನಮಗಿದೆ. ಸುಳ್ಳು ಪ್ರಚಾರ, ಪೊಳ್ಳು ಬೆದರಿಕೆಗಳು ಹೇಡಿಗಳ ಲಕ್ಷಣ. ಇದರಿಂದಾಗಿ ತಲೆ ತಗ್ಗಿಸುವ ಪ್ರಶ್ನೆಯೇ ಇಲ್ಲ. ನ್ಯಾಯಾಂಗದ ಹೋರಾಟ ಮುಂದುವರಿಯಲಿದೆ, ಅಂತಿಮ ಗೆಲುವು ನಮ್ಮದೇ ಆಗಿರುತ್ತದೆ’ ಎಂದು ಗುಡುಗಿದ್ದಾರೆ.

‘ಸತ್ಯವನ್ನು ಹೇಳಿ ಜನ ಜಾಗೃತಿಗೊಳಿಸುತ್ತಿರುವ ನಮ್ಮ ನಾಯಕರಾದ ರಾಹುಲ್‌ ಗಾಂಧಿರವರ ದನಿಯನ್ನು ಸುಳ್ಳು ಮೊಕದ್ದಮೆಗಳು ಮತ್ತು ಮಾಧ್ಯಮಗಳ ಮೂಲಕ ನಡೆಸುವ ಅಪಪ್ರಚಾರದಿಂದ ನಮ್ಮನ್ನು ಅಡಗಿಸಲಾಗದು. ರಾಹುಲ್ ಗಾಂಧಿಯವರ ಜೊತೆ ಇಡೀ ದೇಶ ಇದೆ’ ಎಂದು ಸಿದ್ಧರಾಮಯ್ಯ ಭರವಸೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರಿಗೆ ಗುಜರಾತ್‌ನ ನ್ಯಾಯಾಲಯವು 2019ರಲ್ಲಿ ದಾಖಲಾದ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಗುರುವಾರ ತೀರ್ಪು ನೀಡಿದೆ. ಮಾನನಷ್ಟಕ್ಕೆ ಇರುವ ಗರಿಷ್ಠ ಶಿಕ್ಷೆಯು ಎರಡು ವರ್ಷಗಳಾಗಿವೆ. ‘ಎಲ್ಲ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿದೆ’ ಎಂದು ರಾಹುಲ್‌ ಅವರು ಪ್ರಶ್ನಿಸಿದ್ದರು.

ನ್ಯಾಯಾಲಯವು ತೀರ್ಪು ಪ್ರಕಟಿಸುವಾಗ ರಾಹುಲ್‌ ಅವರು ಹಾಜರಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 499 ಮತ್ತು 500ರ ಅಡಿಯಲ್ಲಿ ರಾಹುಲ್‌ ಅವರು ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದೆ. ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತಿನಲ್ಲಿ ಇರಿಸಿ, ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಅವರಿಗೆ ಜಾಮೀನನ್ನೂ ನೀಡಲಾಗಿದೆ.

ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಪ್ರಿಯಾಕಾ ಗಾಂಧಿ ಸೇರಿದಂತೆ ಹಲವರು ಈ ಪ್ರಕರಣದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.