ADVERTISEMENT

ಚಿತ್ರದುರ್ಗ: ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 15:53 IST
Last Updated 11 ಜುಲೈ 2022, 15:53 IST
ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸೋಮವಾರ ಭೇಟಿ ನೀಡಿದರು. ಆರ್‌ಎಸ್‌ಎಸ್‌ ಮುಖಂಡ ನ.ತಿಪ್ಪೇಸ್ವಾಮಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಇದ್ದಾರೆ.
ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸೋಮವಾರ ಭೇಟಿ ನೀಡಿದರು. ಆರ್‌ಎಸ್‌ಎಸ್‌ ಮುಖಂಡ ನ.ತಿಪ್ಪೇಸ್ವಾಮಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಇದ್ದಾರೆ.   

ಚಿತ್ರದುರ್ಗ: ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ಮಾದಾರ ಚನ್ನಯ್ಯ ಗುರುಪೀಠಕ್ಕೆ ಸೋಮವಾರ ಭೇಟಿ ನೀಡಿ ವಾಸ್ತವ್ಯ ಹೂಡಿದರು. ಮಠಕ್ಕೆ ಆಗಮಿಸಿದ ಅವರನ್ನು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆತ್ಮೀಯವಾಗಿ ಸ್ವಾಗತಿಸಿದರು.

ಬೆಂಗಳೂರಿಗೆ ಗುರುಪೂಜೆಗೆ ಬಂದಿರುವ ಅವರು ರಸ್ತೆ ಮಾರ್ಗವಾಗಿ ಚಿತ್ರದುರ್ಗಕ್ಕೆ ಆಗಮಿಸಿದರು. ಸಂಜೆ 7.20ಕ್ಕೆ ಮಠಕ್ಕೆ ಆಗಮಿಸುತ್ತಿದ್ದಂತೆ ನಾದಸ್ವರ ಮೊಳಗಿತು. ಹಣೆಗೆ ತಿಲಕವಿಟ್ಟು, ಶಾಲು ಹೊದಿಸಿ, ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು.

ಮಠದ ಆವರಣದಲ್ಲಿದ್ದ ಸಂಘದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಭಾಗವತ್‌, ‘ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಹಲವು ಬಾರಿ ಭೇಟಿಯಾಗಿದ್ದೆ. ಈ ಹಿಂದೆಯೇ ಮಠಕ್ಕೆ ಭೇಟಿ ನೀಡಿಬೇಕಿತ್ತು. ಕೋವಿಡ್‌ ಕಾರಣಕ್ಕೆ ಇದು ಸಾಧ್ಯವಾಗಲಿಲ್ಲ. ಈಗ ಕಾಲ ಕೂಡಿಬಂದಿದೆ’ ಎಂದು ಹೇಳಿದರು.

ADVERTISEMENT

ಆರೆಸ್ಸೆಸ್ಸ್ ಮುಖಂಡ ನ.ತಿಪ್ಪೇಸ್ವಾಮಿ ಮಾತನಾಡಿ, ‘ಭಾಗವತ್ ಅವರು ಮಠದಲ್ಲಿ ತಂಗಲಿದ್ದಾರೆ. ಮಂಗಳವಾರ ಈ ಭಾಗದ ವಿವಿಧ ಮಠಾಧೀಶರೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ಮಠಾಧೀಶರೊಂದಿಗೆ ಸಂವಾದ ಇಂದು

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ದಲಿತ ಮತ್ತು ಹಿಂದುಳಿದ ಮಠಾಧೀಶರೊಂದಿಗೆ ಮಂಗಳವಾರ ಸಂವಾದ ನಡೆಸಲಿದ್ದಾರೆ.

ಆಯ್ದ ಮಠಾಧೀಶರನ್ನು ಮಾತ್ರ ಸಭೆಗೆ ಆಹ್ವಾನಿಸಲಾಗಿದೆ. ಸಭೆಯಲ್ಲಿ 20ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ಸಭೆ ನಿಗದಿಯಾಗಿದೆ. ಧಾರ್ಮಿಕ ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಮಠಕ್ಕೆ ಭಾರಿ ಭದ್ರತೆ

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ವಾಸ್ತವ್ಯ ಹೂಡಿದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭಾರಿ ಭದ್ರತೆ ಕಲ್ಪಿಸಲಾಗಿದೆ. ಭಾಗವತ್‌ ಅವರಿಗೆ ಝಡ್‌ಪ್ಲೆಸ್‌ ಭದ್ರತೆ ಇದೆ.

ಮಠಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 48ರ ಸರ್ವಿಸ್‌ ರಸ್ತೆಯಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. 400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಭಾಗವತ್‌ ಅವರು ಬೆಂಗಳೂರಿಗೆ ತೆರಳಲಿದ್ದಾರೆ.

ಆರ್‌ಎಸ್‌ಎಸ್‌ ಸಹಸರಕಾರ್ಯವಾಹ ಮುಕುಂದ್, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ, ಕೃಷಿ ಸಚಿವ ಬಿ.ಸಿ.ಪಾಟೀಲ, ಸಾರಿಗೆ ಸಚಿವ ಬಿ.ಶ್ರೀರಾಮುಲು, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ದಡೆಸೂಗರು ಬಸವರಾಜ, ದುರ್ಯೋಧನ ಐಹೊಳೆ, ಪ್ರೊ.ಲಿಂಗಣ್ಣ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಮಾಜಿ ಸಚಿವ ರಮೇಶ್ ಜಿಗಜಿಣಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.