ಬೆಂಗಳೂರು: 2022–23 ನೇ ಹಣಕಾಸು ವರ್ಷಕ್ಕಾಗಿ ₹2.71ಲಕ್ಷ ಕೋಟಿ ಮೀರದಷ್ಟು ಮೊಬಲಗನ್ನು ಮಾತ್ರ ರಾಜ್ಯ ಸಂಚಿತ ನಿಧಿಯಿಂದ ಸಂದಾಯ ಮಾಡಲು ‘ಕರ್ನಾಟಕ ಧನವಿನಿಯೋಗ ಮಸೂದೆ’ ಸಂಖ್ಯೆ 2 ಕ್ಕೆ ವಿಧಾನಸಭೆ ಮಂಗಳವಾರ ಒಪ್ಪಿಗೆ ನೀಡಿತು.
ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಸೂದೆ ಮಂಡಿಸಿದರು. ಈ ಮೂಲಕ 2022–23 ನೇ ಸಾಲಿನ ಬಜೆಟ್‌ಗೆ ಅಂಗೀಕಾರ ಪಡೆಯಲಾಯಿತು.
ಆರ್ಥಿಕ ಹೊಣೆಗಾರಿಕೆ ಮಸೂದೆ: 2022–23 ನೇ ಸಾಲಿನಲ್ಲಿ ಆರ್ಥಿಕ ಕೊರತೆಯನ್ನು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇ 3.5 ರವರೆಗೆ ಹೆಚ್ಚಿಸಲು ಅನುಮತಿ ನೀಡುವ ‘ಕರ್ನಾಟಕ ಆರ್ಥಿಕ ಹೊಣೆಗಾರಿಕೆ(ತಿದ್ದುಪಡಿ) ಮಸೂದೆ 2022’ ಕ್ಕೆ ವಿಧಾನಸಭೆ ಒಪ್ಪಿಗೆ
ನೀಡಿತು.
2022–23 ನೇ ಆರ್ಥಿಕ ವರ್ಷದ ಅವಧಿಯಲ್ಲಿ ಕೋವಿಡ್ ಅಲೆಗಳ ಪರಿಣಾಮ, ಮಂದಗತಿಯ ಆರ್ಥಿಕ ಚೇತರಿಕೆ ಕಾರಣದಿಂದ ರಾಜಸ್ವ ಕೊರತೆ ಆಗಬಹುದು. ಅಲ್ಲದೆ, ಈ ಅವಧಿಯಲ್ಲಿ ಒಟ್ಟು ಹೊಣೆಗಾರಿಕೆ (ಸಾಲ) ಅಂದಾಜು ಒಟ್ಟು ಆಂತರಿಕ ಉತ್ಪನ್ನದ ಶೇ 25 ರಷ್ಟು ಮೀರಬಹುದು ಎಂಬ ಕಾರಣಕ್ಕಾಗಿ ಈ ಮಸೂದೆ ಮಂಡಿಸಿರುವುದಾಗಿ ಮುಖ್ಯಮಂತ್ರಿಯವರು ತಿಳಿಸಿದರು.
ಮೋಟಾರು ವಾಹನ ತೆರಿಗೆ ಮಸೂದೆ: ತೆರಿಗೆ ಪಾವತಿಯ ಅವಧಿಯನ್ನು 15 ದಿನಗಳಿಂದ ಒಂದು ತಿಂಗಳಿಗೆ ವಿಸ್ತರಿಸಲು, ₹30 ಸಾವಿರ ಮೂರು ತಿಂಗಳಿಗೊಮ್ಮೆ ಪಾವತಿಸಬೇಕಾದ ವಾಹನಕ್ಕೆ ಸಂಬಂಧಿಸಿದ ತೆರಿಗೆಯನ್ನು ತೆರಿಗೆಯ ಸಿಂಧುತ್ವ ಮುಗಿಯುವುದಕ್ಕೆ ಮೊದಲು ದಾಮಾಷಾ (ಪ್ರೊ ರೇಟಾ) ಆಧಾರದ ಮೇಲೆ ತಿಂಗಳಿಗೆ ಪಾವತಿಸುವ ಉದ್ದೇಶಕ್ಕಾಗಿ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ಮಸೂದೆ’ಗೂ ವಿಧಾನಸಭೆ ಒಪ್ಪಿಗೆ ನೀಡಿತು. ಸಾರಿಗೆ ಸಚಿವ ಬಿ.ಶ್ರೀರಾಮುಲು ಮಸೂದೆ ಮಂಡಿಸಿದರು.
ವಿಧಾನ ಪರಿಷತ್‌ನಲ್ಲೂ ಬಜೆಟ್‌ಗೆ ಅನುಮೋದನೆ ದೊರೆಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.