ADVERTISEMENT

ತಗ್ಗಿದ ಮಳೆ ಅಬ್ಬರ: ಈಗ ನೆರೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 18:29 IST
Last Updated 8 ಜುಲೈ 2022, 18:29 IST
ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿಯ ಪ್ರಾಂಗಣಕ್ಕೆ ಕುಬ್ಜಾ ನದಿಯ ನೀರು ಬಂದಿದೆ
ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿಯ ಪ್ರಾಂಗಣಕ್ಕೆ ಕುಬ್ಜಾ ನದಿಯ ನೀರು ಬಂದಿದೆ   

ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಅಬ್ಬರ ಕಡಿಮೆಯಾಗಿದೆ. ಉತ್ತರ ಕನ್ನಡದ ಕರಾವಳಿಯಲ್ಲಿ ಗುರುವಾರ ತಡರಾತ್ರಿಯಿಂದ ಶುಕ್ರವಾರ ಮಧ್ಯಾಹ್ನದ ತನಕ ನಿರಂತರವಾಗಿ ಧಾರಾಕಾರ ಮಳೆಯಾಗಿದೆ.

ಕೆಲ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗ್ರಾಮಗಳಿಗೆ, ಹೊಲ–ಗದ್ದೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ. ರಸ್ತೆಗಳಲ್ಲಿ ಗುಡ್ಡ ಕುಸಿತ, ನೀರು ನಿಂತ ಪರಿಣಾಮ ಕೆಲವೆಡೆ ಜನರ–ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ನಾಗೂರ (ಎನ್) ಗ್ರಾಮ ಸಮೀಪದ ಹಳ್ಳದಲ್ಲಿ ಮಂಗಳವಾರ ಕೊಚ್ಚಿ ಹೋಗಿದ್ದ ಸುಮನಬಾಯಿ ಬಾಬುರೆಡ್ಡಿ ಖಂದಾಡೆ (48) ಎಂಬುವವರ ಶವ ಗುರುವಾರ ರಾತ್ರಿ ಪತ್ತೆಯಾಗಿದೆ.

ADVERTISEMENT

ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ರಾಜ್ಯದ ಜಲಾಶಯಗಳಿಗೆ ಒಳಹರಿವು ಹೆಚ್ಚಳವಾಗಿದೆ.ಚಿಕ್ಕೋಡಿ ತಾಲ್ಲೂಕಿನ ನಾಲ್ಕು ಕಿರು ಸೇತುವೆಗಳು ‌ಮುಳುಗಡೆಯಾಗಿವೆ.

ಸೌಪರ್ಣಿಕ ನದಿ ಉಕ್ಕಿ ಹರಿದು ಜಲಾವೃತಗೊಂಡಿರುವ ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ನಾವುಂದದಲ್ಲಿ ನೆರೆ ತಗ್ಗಿಲ್ಲ. ಮಲೆನಾಡಿನ ತಪ್ಪಲಿನಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. 100ಕ್ಕೂಹೆಚ್ಚುಮನೆಗಳು ಭಾಗಶಃ ಮುಳುಗಡೆಯಾಗಿವೆ.

ಜಿಲ್ಲಾಡಳಿತ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಮುಂದುವರಿಸಿದೆ. ಆದರೆ, ಬಹುತೇಕರು ಕಾಳಜಿ ಕೇಂದ್ರ
ಗಳಿಗೆ ತೆರಳಲು ಒಪ್ಪುತ್ತಿಲ್ಲ. ಪ್ರತಿ ವರ್ಷ ನೆರೆ ಬಂದು ಗ್ರಾಮ ನಲುಗುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಬದಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಹೊನ್ನಾವರ ತಾಲ್ಲೂಕಿನಲ್ಲಿ ನಾಲ್ಕು ಕಡೆ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, 146 ಜನ ಆಶ್ರಯ ಪಡೆದುಕೊಂಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರೂ ಗುರುವಾರ ರಾತ್ರಿಯಿಡೀ ಸುರಿದ ಮಳೆಗೆ ಅಲ್ಲಲ್ಲಿ ಮನೆಗಳು ಕುಸಿದಿವೆ.ಮಡಿಕೇರಿ– ಮಂಗಳೂರು ರಸ್ತೆಯ ಕರ್ತೋಜಿ ಬಳಿ ನಿರಂತರವಾಗಿ ಮಣ್ಣು ರಸ್ತೆಗೆ ಬೀಳುತ್ತಲೇ ಇದೆ. ಮೂರು ದಿನಗಳಿಂದಲೂ ಗುಡ್ಡದಿಂದ ಕುಸಿಯುತ್ತಿರುವ ಮಣ್ಣನ್ನು ತೆರವುಗೊಳಿಸಲಾಗುತ್ತಿದೆ.

ಶಾಲಾ–ಕಾಲೇಜುಗಳಿಗೆ ರಜೆ: ಕಲಬುರಗಿ, ಕೊಡಗು ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ ಮತ್ತು ಜೊಯಿಡಾ ತಾಲ್ಲೂಕುಗಳ ಶಾಲಾ– ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.