ವಿಜಯಪುರ: ಆಲಮಟ್ಟಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನೀರನ್ನು ಹೊರಬಿಡುವ ಸಾಧ್ಯತೆ ಇರುವುದರಿಂದ ಆಣೆಕಟ್ಟಿನ ಕೆಳಭಾಗದ ಪ್ರದೇಶಗಳಲ್ಲಿ ಮುಳುಗಡೆಯಾಗಲಿರುವ ಎಲ್ಲ ಹಳ್ಳಿಗಳ ಹಾಗೂ ನಗರಗಳ ಸಾರ್ವಜನಿಕರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಿಕೊಳ್ಳಬೇಕು ಆಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಕೃಷ್ಣಾ ನದಿ ಪಾತ್ರದಲ್ಲಿ ವ್ಯಾಪಕವಾಗಿ ಮುಂಗಾರು ಮಳೆ ಸುರಿಯುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಆಣೆಕಟ್ಟೆಯಿಂದ ನೀರು ಹೊರಬಿಡಲಾಗುವುದರಿಂದ ನದಿಯ ಪಕ್ಕದ ಹಳ್ಳಿಯ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಪ್ರಕಟಣೆಯಲ್ಲಿ ಮುನ್ಸೂಚನೆ ನೀಡಿದ್ದಾರೆ.
ಇದನ್ನೂ ಓದಿ...ಮಲೆನಾಡಿನಲ್ಲಿ ಉತ್ತಮ ಮಳೆ: ತುಂಗಭದ್ರೆ ಒಳಹರಿವು ಹೆಚ್ಚಳ
ಜಲಾಶಯದ ಮಟ್ಟ: 519.60 ಮೀ. ಗರಿಷ್ಠ ಎತ್ತರದ ಆಲಮಟ್ಟಿ ಜಲಾಶಯದಲ್ಲಿ ಬುಧವಾರ 516.30 ಮೀ. ನೀರು ಸಂಗ್ರಹವಾಗಿದೆ. ಬುಧವಾರ ಬೆಳಿಗ್ಗೆ 26,604 ಕ್ಯುಸೆಕ್ ಇದ್ದ ಒಳಹರಿವು ಸಂಜೆಯ ವೇಳೆಗೆ 30 ಸಾವಿರ ಕ್ಯುಸೆಕ್ ಏರಿಕೆಯಾಗಿದೆ. ಸದ್ಯ ಜಲಾಶಯದಲ್ಲಿ 76.252 ಟಿಎಂಸಿ ಅಡಿ ನೀರು ಸಂಗ್ರಹವಿದೆ.
ಮಹಾರಾಷ್ಟ್ರದಲ್ಲಿ ಮಳೆ:ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಯರಳವಾಡಿಯಲ್ಲಿ 400 ಮಿ.ಮೀ, ಕೊಯ್ನಾದಲ್ಲಿ 106 ಮಿ.ಮೀ, ಪಾತಗಾಂವದಲ್ಲಿ 160 ಮಿ.ಮೀ, ರಾಧಾನಗರಿಯಲ್ಲಿ 155 ಮಿ.ಮೀ ಮಳೆಯಾಗಿದೆ. ಕರ್ನಾಟಕಕ್ಕೆ ಬಂದು ಸೇರುವ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ಬಳಿ ಕೃಷ್ಣಾ ನದಿಯ ಹರಿವು 36,250 ಕ್ಯುಸೆಕ್ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.