ADVERTISEMENT

ಗ್ರಾಮ ಪಂಚಾಯಿತಿ: ರಾಜ್ಯದ 4,078 ಸದಸ್ಯರು ಅನಕ್ಷರಸ್ಥರು

‘ಸಾಕ್ಷರ ಸನ್ಮಾನ’ ಮೂಲಕ ಓದು, ಬರಹ ಕಲಿಸುವ ಪ್ರಯತ್ನ

ಗಣಪತಿ ಹೆಗಡೆ
Published 21 ಜನವರಿ 2024, 19:48 IST
Last Updated 21 ಜನವರಿ 2024, 19:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ರಾಜ್ಯದಲ್ಲಿ 4,078 ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ಅನಕ್ಷರಸ್ಥರಿದ್ದು, ಅವರಿಗೆ ಅಕ್ಷರ ಕಲಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಕ್ರಮ ಕೈಗೊಂಡಿದೆ.

ರಾಜ್ಯದಲ್ಲಿ 6,028 ಗ್ರಾಮ ಪಂಚಾಯಿತಿಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಈ ಪೈಕಿ ಶೇ 4.4 ರಷ್ಟು ಸದಸ್ಯರಿಗೆ ಓದು, ಬರಹ ಗೊತ್ತಿಲ್ಲ. ಅವರ ಅಕ್ಷರಾಭ್ಯಾಸಕ್ಕೆ ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಂಸ್ಥೆ ‘ಸಾಕ್ಷರ ಸನ್ಮಾನ’ ಕಾರ್ಯಕ್ರಮ ರೂಪಿಸಿದೆ.

‘ಪ್ರತಿ ವರ್ಷ ಸಮೀಕ್ಷೆ ನಡೆಸಿ ಅನಕ್ಷರಸ್ಥ ಜನಪ್ರತಿನಿಧಿಗಳನ್ನು ಗುರುತಿಸಲಾಗುತ್ತದೆ. ಕಳೆದ ವರ್ಷ 5,798 ಸದಸ್ಯರನ್ನು ಅನಕ್ಷರಸ್ಥರು ಎಂದು ಗುರುತಿಸಲಾಗಿತ್ತು. ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳದವರು ಹೆಚ್ಚಿದ್ದರು. ಈ ಪೈಕಿ 3,011 ಮಂದಿಗೆ ತರಬೇತಿ ನೀಡಿ, ಸಾಕ್ಷರರನ್ನಾಗಿಸಲಾಗಿದೆ. ಈ ಸಲ 21 ಜಿಲ್ಲೆಗಳ ಅನಕ್ಷರಸ್ಥ ಸದಸ್ಯರಿಗೆ ತರಬೇತಿ ನೀಡಲಾಗುವುದು. ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ ಅನಕ್ಷರಸ್ಥರು ಹೆಚ್ಚಿದ್ದಾರೆ ಎಂದು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಂಸ್ಥೆಯ ಸಂಯೋಜಕ ಡಾ. ಹೇರಂಬ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಅಕ್ಷರ ಬಾರ‌ದವರಲ್ಲಿ ಹೆಚ್ಚಿನವರು ಮಹಿಳಾ ಸದಸ್ಯರಿದ್ದಾರೆ. ಸ್ವಸಹಾಯ ಸಂಘ, ಸ್ತ್ರೀಶಕ್ತಿ ಸಂಘಗಳಲ್ಲೂ ಸಕ್ರಿಯರಾಗಿರುವ ಅವರು ತಮ್ಮ ಹೆಸರಿನಲ್ಲಿ ಸಹಿ ಮಾಡುವುದು ಕಲಿತಿದ್ದಾರೆ. ಆದರೆ ಅಕ್ಷರ ಗುರುತಿಸಿ ಓದುವುದು ಅವರಿಗೆ ಕಷ್ಟವಾಗುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರ ವಾಸನ್ ತಿಳಿಸಿದರು.

‘ಆರ್ಥಿಕ, ಸಾಮಾಜಿಕ ಸ್ಥಿತಿಯ ಕಾರಣಕ್ಕೆ ಶಿಕ್ಷಣ ಪಡೆಯಲು ಸಮಸ್ಯೆ ಆಗಿತ್ತು. ಸಂವಿಧಾನದ ಬಲದಿಂದ ಜನಪ್ರತಿನಿಧಿ ಆಗಿದ್ದೇನೆ. ಜನಪ್ರತಿನಿಧಿಯಾದ ಬಳಿಕ ಅಕ್ಷರ ಕಲಿಯಲು ಅವಕಾಶ ಆಗಿದ್ದು ಮುಜುಗರ ತಂದರೂ ಉತ್ತಮ ಅವಕಾಶ ಎಂದು ಭಾವಿಸುವೆ’ ಎಂದು ಶಿರಸಿ ತಾಲ್ಲೂಕಿನ ಉಂಚಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಪ್ರತಿಕ್ರಿಯಿಸಿದರು.

ಓದು, ಬರಹ ಗೊತ್ತಿಲ್ಲದ 2,800 ಗ್ರಾಮ ಪಂಚಾಯಿತಿ ಸದಸ್ಯರಿಗೆ ಈ ವರ್ಷ ಸ್ಥಳೀಯ ಸಾಕ್ಷ ರತಾ ಬೋಧಕರ ಮೂಲಕ ತರಬೇತಿ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ.
–ಡಾ.ಹೇರಂಬ, ಸಂಯೋಜಕ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಂಸ್ಥೆ

ತರಬೇತಿ ಹೇಗೆ?

‘ಅನಕ್ಷರಸ್ಥ ಎಂದು ಗುರುತಿಸಲ್ಪಟ್ಟ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಂಪನ್ಮೂಲ ವ್ಯಕ್ತಿಗಳು ಮೂರು ದಿನ ತಾಲ್ಲೂಕು ಮಟ್ಟದಲ್ಲಿ ಸಾಕ್ಷರತೆ ಕುರಿತು ತರಬೇತಿ ನೀಡುವರು. ಒಂದು ತಿಂಗಳವರೆಗೆ ಅವರಿಗೆ ನಿತ್ಯ ಕೆಲ ಗಂಟೆ ಪಾಠ ಮಾಡಲು ಆಯಾ ಗ್ರಾಮದಲ್ಲಿ ಗುರುತಿಸಲ್ಪಟ್ಟ ಸಾಕ್ಷರ ಬೋಧಕರನ್ನು ನೇಮಿಸಲಾಗುತ್ತದೆ. ಅಕ್ಷರಗಳ ಗುರುತಿಸುವಿಕೆ, ಬರೆಯುವ ರೂಢಿ ಹೇಳಿಕೊಡುವ ಜತೆಗೆ ಪತ್ರ ಬರೆಯುವುದು, ನಾಯಕತ್ವ ಗುಣ, ಸಮುದಾಯ ಸಂವಹನ, ಗ್ರಾಮಸಭೆಗಳು ಸೇರಿ 15 ವಿಷಯಗಳ ಕುರಿತು ಬೋಧಿ ಸಲಾಗುವುದು’ ಎಂದು ಉತ್ತರ ಕನ್ನಡ ಜಿಲ್ಲಾ ಸಾಕ್ಷರತಾ ಅಧಿಕಾರಿ ಉಮೇಶ ನಾಯ್ಕ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.