ADVERTISEMENT

ಹಿಂದೂ ಶಿಲ್ಪಿಯ ಕೈಯಲ್ಲರಳಿದ ಮಸೀದಿ

ಕಾಪು ಸಮೀಪದ ಮಜೂರು–- ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಆಕರ್ಷಣೆ

ಹಮೀದ್ ಪಡುಬಿದ್ರಿ
Published 5 ಏಪ್ರಿಲ್ 2019, 19:26 IST
Last Updated 5 ಏಪ್ರಿಲ್ 2019, 19:26 IST
ಆಕರ್ಷಕ ಶೈಲಿಯ ಮರದ ಕೆತ್ತನೆಯ ಕುಸುರಿ ಕೆಲಸದ ಮೂಲಕ ಮಜೂರು - ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿ ಗಮನಸೆಳೆಯುತ್ತಿದೆ.
ಆಕರ್ಷಕ ಶೈಲಿಯ ಮರದ ಕೆತ್ತನೆಯ ಕುಸುರಿ ಕೆಲಸದ ಮೂಲಕ ಮಜೂರು - ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿ ಗಮನಸೆಳೆಯುತ್ತಿದೆ.   

ಪಡುಬಿದ್ರಿ: ಉಡುಪಿ ಜಿಲ್ಲೆಯ ಕಾಪುವಿನಿಂದ 5 ಕಿ.ಮೀ. ದೂರದಲ್ಲಿರುವ ಮಜೂರು-ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಗೆ ಹಿಂದೂ ಶಿಲ್ಪಿಯೊಬ್ಬರು ಆಕರ್ಷಕ ರೀತಿಯ ಇಸ್ಲಾಂ ಶೈಲಿಯ ಮರದ ಕೆತ್ತನೆಯನ್ನು ಮಾಡುವ ಮೂಲಕ ಕರಾವಳಿ ಭಾಗದಲ್ಲಿ ಅತಿ ಅಗತ್ಯವಾಗಿ ಬೇಕಾಗಿದ್ದ ವಿಶಿಷ್ಟ ರೀತಿಯ ಸೌಹಾರ್ದದ ವಾತಾವರಣ ನಿರ್ಮಿಸಿಕೊಟ್ಟಿದ್ದಾರೆ.

ಹಿಂದೂ ದಾರು ಶಿಲ್ಪಿ (ಮರದ ಕೆತ್ತನೆಗಾರ) ಹರೀಶ್ ಆಚಾರ್ಯ ಉಳಿಯಾರು ಅವರು ಅಂದವಾದ ಮಸೀದಿಯ ಮರದ ಕೆತ್ತನೆ ಪೂರೈಸಿ ಒಮ್ಮಿಂದೊಮ್ಮೆಲೆ ಕರಾವಳಿ ನೆಲದಂತೆಯೇ ವಿದೇಶದಲ್ಲೂ ಬೇಡಿಕೆಯ ಶಿಲ್ಪಿಯಾಗಿಬಿಟ್ಟಿದ್ದಾರೆ.

ರಾಜ ಮಹಾರಾಜರು ಕಟ್ಟಿಸಿದ ಹಿಂದೂ ದೇವಾಲಯಗಳಲ್ಲಿ ಅದ್ಭುತ ಎನಿಸುವಂತಹ ಕಲ್ಲಿನ ಕೆತ್ತನೆಯನ್ನು ಕಾಣಬಹುದು. ಅಂತೆಯೇ, ಸುಮಾರು ₹ 1 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡಿದೆ.

ADVERTISEMENT

ಹಲವು ದೇಶಗಳ ವಾಸ್ತುಶಿಲ್ಪದ ಮೇಲೆ ಪ್ರಭಾವ ಬೀರಿರುವ ಹಾಗೂ ಹಲವಾರು ದೇಶಗಳ ವಾಸ್ತುಶಿಲ್ಪ ಶೈಲಿಯಿಂದ ಪ್ರಭಾವಿತಗೊಂಡಿರುವ ಇಸ್ಲಾಂ ವಾಸ್ತುಶಿಲ್ಪದ ರಮ್ಯತೆಗೆ ಮನಸೋಲದವರಿಲ್ಲ. ಸೃಜನಶೀಲತೆ ಹಾಗೂ ಕುಸುರಿ ಶ್ರೀಮಂತಿಕೆಯಿಂದ ಕಣ್ಮನ ಸೆಳೆಯುವ ಇಸ್ಲಾಂ ಶೈಲಿಯ ಮರದ ಕೆತ್ತನೆಯ ವೈಭವದೊಂದಿಗೆ ಹೊಸ ರೂಪ ಪಡೆದಿರುವ ಮಜೂರು-ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿ ಈಗ ಜನಾಕರ್ಷಣೆಯ ಕೇಂದ್ರವಾಗಿದೆ.

1000 ಸಿಎಫ್‌ಟಿಯಷ್ಟು ಸಾಗುವಾನಿ ಮರ ಬಳಕೆ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಯಾವುದೇ ಮಸೀದಿಯಲ್ಲೂ ಕಾಣಸಿಗದಂತಹ ಕಲಾ ವೈಭವ ಮಜೂರು-ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಇದೆ. ಇದಕ್ಕಾಗಿ 1 ಸಾವಿರ ಸಿಎಫ್‌ಟಿಯಷ್ಟು ಸಾಗುವಾನಿ ಮರವನ್ನು ಉಪಯೋಗಿಸಲಾಗಿದ್ದು, ಮಸೀದಿ ವ್ಯಾಪ್ತಿಯೊಳಗಿನ 51 ಮನೆಗಳ ಜನರು 57 ಸಾಗುವಾನಿ ಮರಗಳನ್ನು ಒದಗಿಸಿದ್ದಾರೆ. ಮುಸ್ಲಿಮರು ಮಾತ್ರವಲ್ಲದೆ ಸ್ಥಳೀಯ ಹಿಂದೂ ಬಾಂಧವರೂ ಕೂಡ ತಾವು ಬೆಳೆಸಿದ ಸಾಗುವಾನಿಮರಗಳನ್ನು ನೀಡಿ ಸೌಹಾರ್ದ ಮೆರೆದಿದ್ದಾರೆ.

ಕೈಚಳಕ: ಹರೀಶ್ ಆಚಾರ್ಯ ಅವರ ಕೈಚಳಕದಲ್ಲಿನ ಕೆತ್ತನೆ ಆಕರ್ಷಕವಾಗಿ ಮೂಡಿಬಂದಿದೆ. ಇವರು ತಮ್ಮದೇ ಕಲ್ಪನೆಯಲ್ಲಿನ ಮಸೀದಿ, ಮಿನಾರ್‌, ಗುಂಬಜ್ ಹೀಗೆ ವಿವಿಧ ಚಿತ್ರಗಳನ್ನು ಬಿಡಿಸಿ ಅದನ್ನು ಮಸೀದಿಯ ಆಡಳಿತ ಕಮಿಟಿಗೆ ನೀಡಿದ್ದರು. ಮಸೀದಿಯಲ್ಲಿ ಕೆತ್ತಲಾಗಿರುವ ಕುಸರಿ ಕೆಲಸದ ವಿನ್ಯಾಸಕ್ಕೆ ಯಾವ ಎಂಜಿನಿಯರ್‌ ಸಹಾಯವನ್ನೂ ಅವರು ಪಡೆದಿಲ್ಲ. ಇಲ್ಲಿ ಕೆತ್ತಿಸಲಾದ ಶಿಲ್ಪದ ಕೆತ್ತನೆಗೆ ಉಡುಪಿ ಜಿಲ್ಲಾ ಖಾಝಿ ಹಾಜಿ ಇಬ್ರಾಹಿಂ ಮುಸ್ಲಿಯಾರ್ಬೇಕಲ್ ಉಸ್ತಾದ್ ಕೂಡ ಮೆಚ್ಚಿ, ಶ್ಲಾಘಿಸಿದ್ದಾರೆ.

ಕುದುರಿದ ಬೇಡಿಕೆ: ಮಸೀದಿಯ ಅಂದ ವೃದ್ಧಿಸಿದ ಹರೀಶ್ ಆಚಾರ್ಯ ಅವರಿಗೆ ಇದೇ ಮಾದರಿಯಲ್ಲಿ ಮಸೀದಿಯ ಒಳಾಂಗಣ ವಿನ್ಯಾಸ ಮಾಡಿಕೊಡುವಂತೆ ಈಗ ದೇಶ– ವಿದೇಶಗಳಿಂದಲೂ ಬೇಡಿಕೆಗಳು ಬರುತ್ತಿವೆ. ಈಚೆಗೆ ಮಸೀದಿಯಲ್ಲಿ ನಡೆದ ಸಮಾರಂಭಕ್ಕೆ ಬಂದಿದ್ದ ದುಬೈ ಉದ್ಯಮಿಯೊಬ್ಬರು ಹರೀಶ್‌ ಆಚಾರ್ಯ ಅವರಿಗೆ ಉಚಿತ ವೀಸಾದೊಂದಿಗೆ ದುಬೈಗೆ ಆಹ್ವಾನ ನೀಡಿದ್ದಾರೆ. ಅಲ್ಲೂ ಕೂಡ ಇದೇ ಶೈಲಿಯ ಮರದ ಕೆತ್ತನೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಹರೀಶ್‌ ಅವರ ಈ ಕುಸುರಿ ಕೆಲಸವನ್ನು ವೀಕ್ಷಿಸಿ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಸಹಿತ ವಿವಿಧೆಡೆಗಳ ಜಮಾತ್‌ನವರು ತಮ್ಮ ಊರಿನ ಮಸೀದಿ ನಿರ್ಮಾಣದಲ್ಲೂ ಕೆತ್ತನೆ ಕೆಲಸ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ.

ಹರೀಶ್‌ಆಚಾರ್ಯ​

‘ಮಜೂರು - ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯನ್ನು ಆಕರ್ಷಕ ಶೈಲಿಯಲ್ಲಿ, ಜಿಲ್ಲೆಗೇ ಮಾದರಿಯಾಗುವಂತೆ ಮರದ ಕೆತ್ತನೆಯೊಂದಿಗೆ ನವೀಕೃತಗೊಳಿಸಬೇಕು ಎನ್ನುವುದು ನಮ್ಮ ಸಂಕಲ್ಪವಾಗಿತ್ತು. ಆದರೆ, ಅದು ಈ ಪರಿ ಅತ್ಯಾಕರ್ಷವಾಗಿ ಮೂಡಿ ಬರುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ’ ಎನ್ನುತ್ತಾರೆ ಮಸೀದಿ ಅಧ್ಯಕ್ಷ ಎಂ.ಎಚ್.ಅಬ್ದುಲ್ಹಮೀದ್.

ಅಂದುಕೊಂಡಿದ್ದಕ್ಕಿಂತ ಅದ್ಭುತ
‘ಮರದ ಕೆತ್ತನೆ, ಕುಸುರಿ ಕೆಲಸದೊಂದಿಗೆ ಕಂಗೊಳಿಸುತ್ತಿರುವ ಮಸೀದಿಯ ಒಳಕ್ಕೆ ಕಾಲಿಟ್ಟ ಕ್ಷಣದಲ್ಲೇ ನಮ್ಮೊಳಗೆ ಒಂದು ಬೆಳಕು ಮೂಡುತ್ತದೆ. ಆ ಬೆಳಕಿನಿಂದ ಅಧ್ಯಾತ್ಮಕ ಸೆಳಕು ಹೊಮ್ಮುತ್ತದೆ. ಪುರಾತನವಾದ ಮಂಗಳೂರಿನ ಮಸೀದಿ, ಕಾಸರಗೋಡು, ಕೇರಳದ ಕೋಡಂಗಲ್ಲೂರು ಮಸೀದಿ, ಬಾರ್ಕೂರಿನ ಮಸೀದಿಗಳಲ್ಲಿ ಅತ್ಯಾಕರ್ಷಕ ಶೈಲಿಯ ಮರದ ಕೆತ್ತನೆ ಕಾಣಸಿಗುತ್ತಿತ್ತು. ಇದರಲ್ಲಿನ ಕೆಲವು ಮಸೀದಿಗಳು ನವೀಕರಣಗೊಳ್ಳುವಾಗ ಆಧುನೀಕತೆಗೆ ಹೊಂದಿಕೊಂಡು ಜೀರ್ಣೋದ್ಧಾರಗೊಂಡಿವೆ. ಅಲ್ಲಿನ ಮಸೀದಿಗಳನ್ನು ಮಾದರಿಯಾಗಿಟ್ಟುಕೊಂಡು ನಮ್ಮಲ್ಲೂ ಇಂತಹ ಕುಸುರಿ ಬೇಕೆಂದಷ್ಟೇ ಹರೀಶ್ ಆಚಾರ್ಯ ಅವರಿಗೆ ತಿಳಿಸಿದ್ದೆವು. ಆದರೆ, ಇಲ್ಲಿನ ಕೆತ್ತನೆ ಕೆಲಸ ಅವೆಲ್ಲಕ್ಕಿಂತಲೂ ಅತ್ಯದ್ಭುತವಾಗಿ ಮೂಡಿಬಂದಿದೆ’ ಎನ್ನುತ್ತಾರೆ ಮಜೂರು ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್‌ ರಶೀದ್ ಸಖಾಫಿ ಅಲ್‌ಕಾಮಿಲ್.

ಮೆಚ್ಚುಗೆಯ ಮಹಾಪೂರ
‘ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಹಿತವಾಗಿ ಕರಾವಳಿಯ ವಿವಿಧ ದೇವಸ್ಥಾನಗಳಲ್ಲಿ ಮರದ ಕೆತ್ತನೆ ಕೆಲಸ ಮಾಡಿದ್ದೇನೆ. ಆದರೆ, ಮಸೀದಿಯ ಕುಸುರಿ ಕೆಲಸ ಮಾಡಿದ್ದು ಇದೇ ಮೊದಲು. ಗುರುಗಳಾದ ಕೃಷ್ಣ ಆಚಾರ್ಯ ಮತ್ತು ಗಣಪತಿ ಆಚಾರ್ಯ ಅವರು ಕಲಿಸಿದ ವಿದ್ಯೆಯನ್ನು ಬಳಸಿಕೊಂಡು ನಾನೇ ಸ್ವತಃ ಚಿತ್ರಗಳನ್ನು ರಚಿಸಿ, ಅದನ್ನು ಧರ್ಮಗುರುಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಿದ್ದನ್ನು ಇಲ್ಲಿ ಕೆತ್ತಿದ್ದೇನೆ. 10 ತಿಂಗಳ ನಿರಂತರ ಕೆಲಸದ ವೇಳೆ ಎಲ್ಲರಿಂದಲೂ ಸಂಪೂರ್ಣ ಸಹಕಾರ ದೊರಕಿದೆ. ನನ್ನ ಕೆಲಸಕ್ಕೆ ಜನರಿಂದ ಉತ್ತಮ ಪ್ರಶಂಸೆ ದೊರಕಿದೆ’ ಎನ್ನುತ್ತಾರೆ ಹರೀಶ್ ಆಚಾರ್ಯ ಉಳಿಯಾರು.

**

ಕರಾವಳಿಯಲ್ಲಿ ಬೇರೆಲ್ಲೂ ಕಾಣಸಿಗದಂತಹ ಅತ್ಯಪೂರ್ವ ಶೈಲಿಯ ಕುಸುರಿ ಕೆಲಸದೊಂದಿಗೆ ನಮ್ಮ ಮಸೀದಿ ಕಂಗೊಳಿಸುತ್ತಿದೆ.
-ಎಂ.ಎಚ್.ಅಬ್ದುಲ್ ಹಮೀದ್, ಮಸೀದಿಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.