ADVERTISEMENT

ಕಾಂಗ್ರೆಸ್‌ಗೆ 160 ಸ್ಥಾನ ಪಾಕಿಸ್ತಾನದ ವರದಿಯಿರಬೇಕು: ಸಿ.ಟಿ.ರವಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 14:26 IST
Last Updated 3 ಫೆಬ್ರುವರಿ 2023, 14:26 IST
   

ಬೆಂಗಳೂರು:‘ಕಾಂಗ್ರೆಸ್‌ ಪಕ್ಷದ ಸಮೀಕ್ಷೆಯ ಪ್ರಕಾರ ಚುನಾವಣೆಯಲ್ಲಿ 160 ಸ್ಥಾನ ಸಿಗುತ್ತದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿಕೊಂಡಿದ್ದಾರೆ. ಬಹುಶಃ ಅವರು ಪಾಕಿಸ್ತಾನದಿಂದ ವರದಿ ಪಡೆದಿರಬೇಕು’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪ್ರಮುಖ ನಾಯಕರ ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಾಕಿಸ್ತಾನದ ಈಗಿನ ಸರ್ಕಾರ ಪತನ ಆಗುತ್ತದೆ ಎಂಬ ಮಾಹಿತಿ ಇದೆ. ಬಹುಶಃ ಅಲ್ಲಿಂದ ವರದಿ ತರಿಸಿಕೊಂಡಿರಬೇಕು ಎಂದರು.

ಕರ್ನಾಟಕದಲ್ಲೂ ಉತ್ತರ ಪ್ರದೇಶ, ಗೋವಾ ಮತ್ತು ಗುಜರಾತ್‌ ಮಾದರಿಯ ಫಲಿತಾಂಶವೇ ಬರುತ್ತದೆ. ಕಾಂಗ್ರೆಸ್‌ನವರು 160 ರ ಹಗಲುಗನಸು ಕಾಣುತ್ತಿರಲಿ ಎಂದರು.

ADVERTISEMENT

ಕೆಲವು ಮನೆತನಗಳಿಗೆ ತಾವು ಹುಟ್ಟಿರೋದೇ ಲೀಡರ್‌ ಆಗಲು ಅಂತ ಅಂದುಕೊಂಡಿದ್ದಾರೆ. ತಮಗೆ ತಾವೇ ಭಾರತ ರತ್ನ ಪ್ರಶಸ್ತಿಯನ್ನೂ ಕೊಟ್ಟುಕೊಂಡು ಬಂದಿದ್ದಾರೆ ಎಂದು ಪರೋಕ್ಷವಾಗಿ ನೆಹರೂ ಕುಟುಂಬದ ವಿರುದ್ಧ ರವಿ ವಾಗ್ದಾಳಿ ನಡೆಸಿದರು.

ಎಂಟು ವರ್ಷಗಳಲ್ಲಿ ದುಪ್ಪಟ್ಟು ಕಾಮಗಾರಿ:

1960 ರಿಂದ 2014 ರವರೆಗೆ ಆದ ಕೆಲಸಗಳಿಗಿಂತಲೂ ಆ ನಂತರದ ಎಂಟು ವರ್ಷಗಳಲ್ಲಿ ದುಪ್ಪಟ್ಟು ಕೆಲಸಗಳು ಆಗಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯಕ್ಕೆ ಹೆಚ್ಚು ಅನುದಾನ ಬಂದಿಲ್ಲ ಎನ್ನುವುದರಲ್ಲಿ ಹುರುಳಿಲ್ಲ. ಮೋದಿ ಆಡಳಿತದಲ್ಲಿ ಹೆಚ್ಚು ಅನುದಾನ ಬಂದಿದೆ ಎಂದರು.

‘ಚುನಾವಣೆ ಘೋಷಣೆ ಆದ ಬಳಿಕ ಟಿಕೆಟ್‌ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ರಮೇಶ ಜಾರಕಿಹೊಳಿ ದೆಹಲಿಯಲ್ಲಿ ನನ್ನನ್ನು ಭೇಟಿ ಮಾಡಿದ್ದು ನಿಜ. ಆದರೆ ಅವರು ಸಿ.ಡಿ ವಿಚಾರವನ್ನು ಪ್ರಸ್ತಾಪ ಮಾಡಿರಲಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.