ADVERTISEMENT

'ಜಾಗೃತಿ ಮಾಹಿತಿ ತಲುಪಿಸಲು ಮಾತೃಭಾಷೆ ಹೆಚ್ಚು ಪರಿಣಾಮಕಾರಿ'

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 18:59 IST
Last Updated 27 ಜನವರಿ 2021, 18:59 IST

ಬೆಂಗಳೂರು: ’ಸರ್ಕಾರದ ವಿವಿಧ ಯೋಜನೆ, ಅಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ಕೋವಿಡ್‌ನಂತಹ ಆರೋಗ್ಯ ಸಂಬಂಧಿತ ಜಾಗೃತಿ ಸಂದೇಶಗಳನ್ನು ಜನಸಾಮಾನ್ಯರಿಗೆ ಮನಮುಟ್ಟುವಂತೆ ತಿಳಿಯಪಡಿಸಲು ಮಾತೃಭಾಷೆ ಬಳಕೆ ಅತ್ಯಂತ ಪರಿಣಾಮಕಾರಿ‘ ಎಂದು ನಗರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ ಅಭಿಪ್ರಾಯಪಟ್ಟರು.

ಆರೋಗ್ಯ ಇಲಾಖೆಯು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಎನ್ನೆಸ್ಸೆಸ್‌ ಭವನದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗ ಮಟ್ಟದ ಜಾನಪದ ಕಲಾವಿದರ ತರಬೇತಿ ಕಾರ್ಯಾಗಾರವನ್ನು ತಮಟೆ ಬಾರಿಸುವುದರ ಮೂಲಕ ಉದ್ಘಾಟಿಸಿದ ಅವರು, ’ಜಾನಪದ ಕಲೆಗಳ ಮೂಲಕ ಮಾತೃಭಾಷೆಯಲ್ಲಿ ನೀಡುವ ಮಾಹಿತಿಯು ನಮ್ಮ ನಾಡಿನ ಗ್ರಾಮೀಣ ಭಾಗದ ಜನರ ಮನಸ್ಸಿನಲ್ಲಿ ನೆಲೆಯೂರುತ್ತದೆ‘ ಎಂದರು.

ಪಾಲಿಕೆಯ ಡಾ. ರಾಮಚಂದ್ರ ಬಿ. ಎಸ್. ಮಾತನಾಡಿ, ’ಟಿ.ವಿ. ಮತ್ತು ಇತರೆ ಮಾಧ್ಯಮಗಳು ಹೆಚ್ಚು ಬಳಕೆಯಾಗುತ್ತಿರುವ ಈಗಿನ ಕಾಲದಲ್ಲಿಯೂ ಜಾನಪದ ಮಾಧ್ಯಮಗಳೇ ಹೆಚ್ಚು ಮಾಹಿತಿ ನೀಡುತ್ತವೆ‘ ಎಂದರು.

ADVERTISEMENT

ನಗರ ಜಿಲ್ಲೆಯ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಆರ್. ಖಲೀಲ್ ಅಹಮದ್, ರಾಮನಗರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಗಂಗಾಧರ್, ನಗರ ಜಿಲ್ಲೆಯ ಕುಟುಂಬ ಕಲ್ಯಾಣಾಧಿಕಾರಿ ಚನ್ನಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.