ADVERTISEMENT

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ: ಉಭಯ ಸದನಗಳಲ್ಲಿ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 23:04 IST
Last Updated 27 ಜನವರಿ 2026, 23:04 IST
ಕರ್ನಾಟಕ ವಿಧಾನಸಭೆ (ಪ್ರಾತಿನಿಧಿಕ ಚಿತ್ರ)
ಕರ್ನಾಟಕ ವಿಧಾನಸಭೆ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಸಂಬಂಧಿಸಿದಂತೆ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಕಾಂಗ್ರೆಸ್‌ ಮತ್ತು ವಿರೋಧಪಕ್ಷಗಳ ಮಧ್ಯೆ ವಾಕ್ಸಮರ ನಡೆಯಿತು.

ವಿಧಾನಪರಿಷತ್‌ನಲ್ಲಿ ಬಿಜೆಪಿ–ಜೆಡಿಎಸ್‌ ಸದಸ್ಯರು ಧರಣಿ ನಡೆಸಿದರೆ, ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಎ.ಎಸ್‌.ಪೊನ್ನಣ್ಣ ಅವರು ರಾಜ್ಯಪಾಲರ ಬಗ್ಗೆ ಆಡಿದ ಮಾತುಗಳ ಕುರಿತು ಸಭಾಧ್ಯಕ್ಷರು ರೂಲಿಂಗ್ ನೀಡಿದರು.

ವಿಧಾನಸಭೆಯಲ್ಲಿ ಪೊನ್ನಣ್ಣ ಅವರು ರಾಜ್ಯಪಾಲರ ನಡೆಯನ್ನು ಟೀಕಿಸಿದಾಗ, ಬಿಜೆಪಿ ಸದಸ್ಯರು ಆಕ್ಷೇಪ ಎತ್ತಿದರು. ಪೊನ್ನಣ್ಣ ಅವರು ಪದೇ ಪದೇ ಇದೇ ವಿಷಯ ಪ್ರಸ್ತಾಪಿಸಿದಾಗ ಸುರೇಶ್ ಕುಮಾರ್ ಅವರು ಕ್ರಿಯಾಲೋಪ ಎತ್ತಿ ರೂಲಿಂಗ್‌ ನೀಡುವಂತೆ ಆಗ್ರಹಿಸಿದರು. ‘ಸಾಂವಿಧಾನಿಕ ಉನ್ನತ ಹುದ್ದೆಗಳಲ್ಲಿ ಇರುವವರ ನಡವಳಿಕೆ ಬಗ್ಗೆ ಇಲ್ಲಿ ಪ್ರಸ್ತಾಪಿಸುವಂತಿಲ್ಲ’ ಎಂದು ಸಭಾಧ್ಯಕ್ಷ ಯು.ಟಿ ಖಾದರ್‌ ಅವರು ರೂಲಿಂಗ್‌ ನೀಡಿದರು.

ADVERTISEMENT

‘ಸಚಿವ ಸಂಪುಟ ಅನುಮೋದಿಸಿದ ಭಾಷಣವನ್ನು ಓದದ ರಾಜ್ಯಪಾಲರ ನಡೆ ಆತಂಕಕಾರಿ. ಅವರು ಕೇಂದ್ರದ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ. ಭಾಷಣದ ಕೊನೆಯ ಸಾಲು ಓದಲು ಕೂಡಾ ಅವರಿಗೆ ತಾಳ್ಮೆ ಇರಲಿಲ್ಲ. ಸುಪ್ರೀಂ ಕೋರ್ಟ್‌ ನೀಡಿರುವ ಹಲವು ತೀರ್ಪುಗಳಲ್ಲಿ ರಾಜ್ಯಪಾಲರುಗಳ ಅಧಿಕಾರ ಕಾರ್ಯವ್ಯಾಪ್ತಿಯ ಉಲ್ಲೇಖಗಳಿವೆ. ಅವೆಲ್ಲವನ್ನೂ ಗಾಳಿಗೆ ತೂರಿದ್ದಾರೆ. ತಮ್ಮ ವಿವೇಚನೆಯಂತೆ ನಡೆಯಲು ಅವರಿಗೆ ಅವಕಾಶವಿಲ್ಲ’ ಎಂದು ರಾಜ್ಯಪಾಲರ ನಡೆಗೆ ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದರು. 

ಮಧ್ಯಪ್ರವೇಶಿಸಿದ ಬಿಜೆಪಿಯ ಎಸ್‌. ಸುರೇಶ್ ಕುಮಾರ್, ‘ರಾಜ್ಯಪಾಲರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯದ ಬಗ್ಗೆ ಮಾತನಾಡಬೇಕಾದವರು ರಾಜ್ಯಪಾಲರ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾದರೆ, ಇವರು ರಾಜ್ಯಪಾಲರ ಭಾಷಣದ ಬಗ್ಗೆ ಟೀಕೆ ಮಾಡುತ್ತಿದ್ದಾರಾ’ ಎಂದು ಪ್ರಶ್ನಿಸಿದರು.

ಬಿಜೆಪಿಯ ಸಿ.ಎನ್‌. ಅಶ್ವತ್ಥನಾರಾಯಣ, ‘ಈ ಬಗ್ಗೆ ಸಭಾಧ್ಯಕ್ಷರು ಸೂಚನೆ ನೀಡಬೇಕು. ಯಾವ ವಿಚಾರ ಚರ್ಚೆ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು. ಈ ವೇಳೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಭೋಜನ ವಿರಾಮದ ಬಳಿಕವೂ ಇದೇ ಚರ್ಚೆ ಮುಂದುವರಿಯಿತು. ‘ನಾನು ರಾಜ್ಯಪಾಲರಿಗೆ ಅಗೌರವ ತರುವ ಮಾತು ಆಡಲಿಲ್ಲ. ಸಂವಿಧಾನದ ಸೆಕ್ಷನ್‌ 176 ರ ಅಡಿ ರಾಜ್ಯಪಾಲರ ಹುದ್ದೆ ಅತಿ ಶ್ರೇಷ್ಠವಾದುದು. ಸಂವಿಧಾನದ ಪ್ರಕಾರ ಅವರು ಕಡ್ಡಾಯವಾಗಿ, ಸಂಪುಟ ಸಭೆ ತೀರ್ಮಾನಿಸಿದ ಭಾಷಣವನ್ನೇ ಓದಲೇಬೇಕು’ ಎಂದು ಪೊನ್ನಣ್ಣ ಹೇಳಿದರು.

‘ವಂದನೆಯೋ ನಿಂದನೆಯೋ ಖಂಡನೆಯೋ’

‘ರಾಜ್ಯಪಾಲರ ಭಾಷಣದ ಬಗ್ಗೆ ವಿಧಾನ ಪರಿಷತ್‌ ಸಭಾನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಭಾಷಣದ ಬಗ್ಗೆ ವಂದನಾ ನಿರ್ಣಯ ಪ್ರಸ್ತಾಪಕ್ಕೆ ಮುನ್ನ, ಅದು  ವಂದನೆಯೋ, ನಿಂದನೆಯೋ, ಖಂಡನೆಯೋ ಎಂಬುದರ ಬಗ್ಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದು  ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷಗಳು ಪಟ್ಟು ಹಿಡಿದು ಧರಣಿ ನಡೆಸಿದವು.

‘ವಿಧಾನ ಮಂಡಲದಲ್ಲಿ ಶಾಸಕರನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣಕ್ಕೆ ವಿಧಾನ ಪರಿಷತ್‌ನ ಶಾಸಕರು, ಅವರಿಗೆ ಕೃತಜ್ಞತಾ ವಂದನೆ ಸಮರ್ಪಿಸುವ ಪ್ರಸ್ತಾವ’ವನ್ನು ಕಾಂಗ್ರೆಸ್‌ನ ಐವನ್‌ ಡಿಸೋಜ ಮಂಡಿಸಿದರು. ಅದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಅವರನ್ನು ವಜಾ ಮಾಡಬೇಕು ಎಂದು ಬಿಜೆಪಿ ಸದಸ್ಯರು ಧರಣಿ ಮಾಡುತ್ತಿದ್ದರು. ಮಾತನಾಡಲು ಇನ್ನೂ ನಾಲ್ವರಿಗೆ ಅವಕಾಶ ನೀಡಬೇಕು ಎಂದು ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ, ‘ಚರ್ಚೆ ಮುಗಿದಿದ್ದು, ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯದ ಪ್ರಸ್ತಾವ ಸಲ್ಲಿಸಲು ಐವನ್‌ ಡಿಸೋಜ ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವಕಾಶ ಮಾಡಿಕೊಟ್ಟರು.

‘ಭ್ರಷ್ಟಾಚಾರ ಆರೋಪ ಹೊತ್ತ ಸಚಿವರನ್ನು ವಜಾ ಮಾಡಬೇಕು’ ಎಂದು ಬಿಜೆಪಿ, ಜೆಡಿಎಸ್‌ ಸದಸ್ಯರು ಘೋಷಣೆಗಳನ್ನು ಕೂಗುತ್ತಿದ್ದರು. ಐವನ್‌ ಡಿಸೋಜ ಮಾತು ಮುಂದುವರಿಸಿದರು. ಈ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಛಲವಾದಿ ನಾರಾಯಣಸ್ವಾಮಿ, ‘ರಾಜ್ಯಪಾಲರ ಭಾಷಣವನ್ನು ಸರ್ಕಾರ ಒಪ್ಪಿದೆಯೇ? ಅವರ ಶಾಸಕರೇ ಧಿಕ್ಕಾರ ಕೂಗಿದ್ದಾರೆ. ಗೂಂಡಾಗಿರಿ ಮಾಡಿದ್ದಾರೆ. ಇದು ವಂದನೆಯೋ ಖಂಡನೆಯೋ ಮೊದಲು ಸ್ಪಷ್ಟಪಡಿಸಿ’ ಎಂದು ಆಗ್ರಹಿಸಿದರು.

‘ರಾಜ್ಯಪಾಲರಿಗೆ ಅಗೌರವ ಸೂಚಿಸಿಲ್ಲ. ಸಂವಿಧಾನ ಪರಿಚ್ಛೇದ 163– 176 ರಂತೆ ನಡೆದುಕೊಂಡಿಲ್ಲ ಎಂದಿದ್ದಾರೆ’ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ ಸಮಜಾಯಿಷಿ ನೀಡಿದರು.

ಮಹಾತ್ಮ ಗಾಂಧಿ ಹೆಸರು ಕಿತ್ತು ಹಾಕಿ, ಈಗ ಗಾಂಧಿ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ಕೂತರೆ, ಅದನ್ನು ಪ್ರಾಮಾಣಿಕತೆ ಎನ್ನುತ್ತಾರೆಯೆ?
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಸಭಾನಾಯಕರೇ ರಾಜ್ಯಪಾಲರ ಭಾಷಣವನ್ನು ಖಂಡಿಸಿದ್ದಾರೆ. ಅಗೌರವ ಸೂಚಿಸಿದ್ದಾರೆ. ಅವರು ಮೊದಲು ಭಾಷಣ ಒಪ್ಪಿದ್ದಾರೆಯೇ ಹೇಳಬೇಕು.
– ಎಸ್‌.ಎಲ್‌. ಭೋಜೇಗೌಡ, ಜೆಡಿಎಸ್‌ ಶಾಸಕ
ರಾಜ್ಯಪಾಲರಿಗೆ ಕಾಂಗ್ರೆಸ್ ಸದಸ್ಯರು ಅಗೌರವ ಸೂಚಿಸಿದ್ದಾರೆ. ಅವರಿಗೆ ಕ್ಷಮೆ ಕೋರಿ ಪತ್ರ ಬರೆಯಬೇಕು. ಅವರ ಭಾಷಣವನ್ನು ಒಪ್ಪಿದ್ದೇವೆ ಎಂದು ಹೇಳಬೇಕು.
– ಛಲವಾದಿ ನಾರಾಯಣಸ್ವಾಮಿ, ವಿರೋಧ ಪಕ್ಷದ ನಾಯಕ, ವಿಧಾನಪರಿಷತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.